ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಕಿರಿಯ ವೈದ್ಯರಿಂದ ಮುಂದುವರಿದ ಧರಣಿ

Published : 12 ಸೆಪ್ಟೆಂಬರ್ 2024, 5:41 IST
Last Updated : 12 ಸೆಪ್ಟೆಂಬರ್ 2024, 5:41 IST
ಫಾಲೋ ಮಾಡಿ
Comments

ಕೋಲ್ಕತ್ತ: ಕೋಲ್ಕತ್ತದ ಆರ್‌.ಜಿ.ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಕರ್ತವ್ಯಕ್ಕೆ ಹಾಜರಾಗದೆ ಕಿರಿಯ ವೈದ್ಯರು, ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ಎದುರು ಧರಣಿ ಮುಂದುವರಿಸಿದ್ದಾರೆ.

ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ‘ಸ್ವಾಸ್ಥ್ಯ ಭವನ’ದ ಎದುರು ಕಳೆದ 40 ಗಂಟೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾತುಕತೆಗೆ ಕಿರಿಯ ವೈದ್ಯರು ಮುಂದಿಟ್ಟಿದ್ದ ಕೆಲವು ಷರತ್ತುಗಳನ್ನು ಪಶ್ಚಿಮ ಬಂಗಾಳ ಸರ್ಕಾರ ತಿರಸ್ಕರಿಸಿದ ಕಾರಣ ಬುಧವಾರ ಸಂಜೆ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ. ಕರ್ತವ್ಯಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ಕಿಮ್ಮತ್ತು ನೀಡದ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ಬಿಕ್ಕಟ್ಟು ಪರಿಹರಿಸಲು ಕಿರಿಯ ವೈದ್ಯರನ್ನು ಸರ್ಕಾರ ಬುಧವಾರ ಮಾತುಕತೆಗೆ ಆಹ್ವಾನಿಸಿ, ನಸುಕಿನಲ್ಲಿ ಇಮೇಲ್‌ ಸಂದೇಶ ಕಳುಹಿಸಿತ್ತು. ಆದರೆ, ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖ ದಲ್ಲಿ ಚರ್ಚೆ ಆಗಬೇಕು ಮತ್ತು ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂದು ಷರತ್ತು ವಿಧಿಸಿದರು. ಆದರೆ, ಸರ್ಕಾರವು ತನ್ನ ನಿಲುವಿಗೆ ದೃಢವಾಗಿ ಅಂಟಿಕೊಂಡು, ಮಾತುಕತೆಯ ಪೂರ್ವ ಷರತ್ತುಗಳಿಗೆ ಸಮ್ಮತಿಸಲು ನಿರಾಕರಿಸಿತ್ತು.

ಸಾಲ್ಸ್ ಲೇಕ್ ಪ್ರದೇಶದ ಕೇಂದ್ರ ಕಚೇರಿ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

‘ನಾವು ಕೆಲಸವನ್ನು ಸ್ಥಗಿತಗೊಳಿಸಿ, ಧರಣಿ ಮುಂದುವರಿಸುತ್ತೇವೆ. ಆದರೆ, ಧರಣಿ ಮುಂದುವರಿಸುವುದು ನಮಗೂ ಇಷ್ಟವಿಲ್ಲ. ನಮ್ಮ ಜೊತೆ ಯಾವುದೇ ಸಭೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ನಮ್ಮ ಧರಣಿ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ’ಎಂದು ಧರಣಿ ನಿರತ ಕಿರಿಯ ವೈದ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಈ ನಡುವೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಸರ್ಕಾರವು ಮಾತುಕತೆಗೆ ಸಿದ್ಧವಿದೆ ಆದರೆ, ಪ್ರತಿಭಟನಾಕಾರರ ಮೇಲೆ ರಾಜಕೀಯ ಶಕ್ತಿಗಳು ಪ್ರಭಾವ ಬೀರುತ್ತಿವೆ ಎಂದು ಆರೋಗ್ಯ ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಪೂರೈಸುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT