ಕೋಲ್ಕತ್ತ: ಕೋಲ್ಕತ್ತದ ಆರ್.ಜಿ.ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಬಂಧಿತ, ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಆಪ್ತ ವ್ಯಕ್ತಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲಾ ಪ್ರದೇಶದ ಚಂದನ್ ಲೋಹಿಯಾ ಅವರ ಫ್ಲ್ಯಾಟ್, ಕಲಿಂದಿ ಬಳಿಯ ಕಚೇರಿಯೊಂದರಲ್ಲಿ ಶೋಧ ನಡೆಸಲಾಗಿದೆ.
ಇ.ಡಿ ಅಧಿಕಾರಿಗಳ ಮತ್ತೊಂದು ತಂಡವು ಉತ್ತರ 24 ಪರಗಣ ಜಿಲ್ಲೆಯ ಚಿನಾರ್ ಪಾರ್ಕ್‌ನಲ್ಲಿರುವ ಸಂದೀಪ್ ಘೋಷ್ ಅವರ ಪೂರ್ವಜರ ನಿವಾಸದಲ್ಲಿ ಶೋಧ ನಡೆಸಿದೆ.
‘ನಮ್ಮ ಅಧಿಕಾರಿಗಳು ಲೋಹಿಯಾ ಮತ್ತು ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ಧಾರೆ. ಟೆಂಡರ್ ನೀಡಿಕೆ ವೇಳೆ ಲೋಹಿಯಾ ಪತ್ನಿ ಅವರಿಗೆ ಘೋಷ್ ಅನುಕೂಲ ಮಾಡಿಕೊಟ್ಟಿದ್ದಾರೆ’ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
‘ಇ.ಡಿಯ ಮತ್ತೊಂದು ತಂಡವು ಆರ್.ಜಿ. ಆಸ್ಪತ್ರೆಗೆ ಸಾಮಗ್ರಿ ಸರಬರಾಜು ಮಾಡುತ್ತಿದ್ದ ಸಂಸ್ಥೆಯ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದೆ. ವೈದ್ಯಕೀಯ ಸಂಸ್ಥೆ ಮತ್ತು ಸಾಮಗ್ರಿಗಳ ಸರಬರಾಜು ಸಂಸ್ಥೆಯ ನಡುವೆ ಕೆಲವು ಸಂಶಯಾಸ್ಪದ ವಹಿವಾಟುಗಳು ನಡೆದಿವೆ’ಎಂದೂ ಅಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ ಜೊತೆಗೆ ಸಿಬಿಐ ಸಹ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಘೋಷ್ ಮತ್ತು ಇತರೆ ಮೂವರನ್ನು ಸಿಬಿಐ ಈ ಹಿಂದೆಯೇ ಬಂಧಿಸಿದೆ.