ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದು ಅವರ ಪತ್ತೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
ನಾಪತ್ತೆಯಾಗಿರುವ 25 ವರ್ಷದ ಯೋಧನನ್ನು ಜಾವೇದ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರು ಕಾಶ್ಮೀರ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದವರು ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾವೇದ್ ಅಹ್ಮದ್ ಕೆಲವು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು. ಶನಿವಾರ ಸಂಜೆ ಸಾಮಾನುಗಳನ್ನು ಖರೀದಿ ಮಾಡಲು ಅವರು ಕಾರಿನಲ್ಲಿ ಮಾರುಕಟ್ಟೆಗೆ ತೆರಳಿದ್ದರು. ಆದರೆ ಅವರು ರಾತ್ರಿ 9 ಗಂಟೆಯಾದರೂ ವಾಪಸ್ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿ, ಪೊಲೀಸರಿಗೆ ದೂರು ನೀಡಿದ್ದಾರೆ. ಜಾವೇದ್ ಅವರ ಕಾರು ಮಾರುಕಟ್ಟೆ ಸಮೀಪದಲ್ಲಿ ಪತ್ತೆಯಾಗಿದ್ದು ಅದರಲ್ಲಿ ರಕ್ತದ ಕಲೆಗಳು ಇವೆ ಎಂದು ಕಾಶ್ಮೀರ ಪೊಲೀಸರು ಹೇಳಿದ್ದಾರೆ.