ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ದೀರ್ಘ ಕಾಲ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿಜೆಪಿ

Published 19 ಮಾರ್ಚ್ 2024, 13:48 IST
Last Updated 19 ಮಾರ್ಚ್ 2024, 13:48 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹಲವು ಸಮನ್ಸ್‌ಗಳನ್ನು ನೀಡಿದರೂ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸಾಕ್ಷಿಗಳು ಇರುವವರೆಗೂ ಕೇಜ್ರಿವಾಲ್‌ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ‘ಅಬಕಾರಿ ನೀತಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿರುವ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಆಮ್‌ ಆದ್ಮಿ ಪಕ್ಷವನ್ನು (ಎಎಪಿ) ತರಾಟೆಗೆ ತೆಗೆದುಕೊಂಡರು. ತನಿಖಾ ಸಂಸ್ಥೆಗಳ ಕ್ರಮಗಳು ಸಾಕ್ಷ್ಯವನ್ನು ಆಧರಿಸಿರುತ್ತವೆ. ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳನ್ನು ಸ್ಥಾಪಿಸುವುದಿಲ್ಲ’ ಎಂದು ಹೇಳಿದ್ದಾರೆ.

ಇ.ಡಿ ಬಿಜೆಪಿಯ ರಾಜಕೀಯ ವಿಭಾಗವಾಗಿದೆ ಎಂದು ಎಎಪಿ ಆರೋಪಿಸಿದ ಒಂದು ದಿನದ ಬಳಿಕೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.

ದೆಹಲಿ ಜಲ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ ಸೋಮವಾರ ಸಮನ್ಸ್‌ ನೀಡಿದೆ. ಆದರೆ, ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿಲ್ಲ.

ಇ.ಡಿ ಸಮನ್ಸ್ ಅನ್ನು 'ಕಾನೂನುಬಾಹಿರ' ಎಂದು ಎಎಪಿ ಕರೆದಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಜ್ರಿವಾಲ್‌ ಅವರನ್ನು ಗುರಿಯಾಗಿಸಲು ಮತ್ತು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಎಎ‍ಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾತ್ರಾ, ‘ಕಳೆದ ಆರು ತಿಂಗಳಲ್ಲಿ ಕೇಜ್ರಿವಾಲ್‌ಗೆ 9 ಸಮನ್ಸ್‌ಗಳನ್ನು ನೀಡಲಾಗಿದೆ. ಆದರೆ, ಅವರು ವಿಚಾರಣೆಗೆ ಹಾಜರಾಗದೆ ಹಲವು ಸಬೂಬುಗಳನ್ನು ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾನೂನಿನ ಕೈಗಳಿಂದ ಎಷ್ಟು ದೂರ ಓಡಿಹೋಗುತ್ತೀರಿ ಎಂದು ಪ್ರಶ್ನಿಸಿದ್ದಾರೆ.

‘ಕೇಜ್ರಿವಾಲ್ ಅವರು ಕೋಟಿಗಟ್ಟಲೆ ಜನರ ನಂಬಿಕೆ, ಸತ್ಯ ಮತ್ತು ಅಭಿವೃದ್ಧಿಯ ಕೊಲೆ ಮಾಡಿದ್ದಾರೆ. ಅದಕ್ಕೆ ಪುರಾವೆಗಳು ಎಲ್ಲೆಡೆ ಲಭ್ಯವಿವೆ. ಅದಕ್ಕಾಗಿಯೇ ಇ.ಡಿ ಅವರಿಗೆ ಸಮನ್ಸ್ ನೀಡುತ್ತಿದೆ. ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ’ ಎಂದು ಪಾತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT