ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ CM ಆಗಿ ಮುಂದುವರಿಯಲಿದ್ದಾರೆ: ಹೈಕೋರ್ಟ್‌ ಅಭಿಪ್ರಾಯ ಪರಿಗಣಿಸದ AAP

Published 29 ಏಪ್ರಿಲ್ 2024, 15:43 IST
Last Updated 29 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ಅರವಿಂದ ಕೇಜ್ರಿವಾಲ್‌ ಅವರೇ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ಸೋಮವಾರ ಹೇಳಿದೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಯಾವೊಬ್ಬ ವ್ಯಕ್ತಿಯೂ ಅನಿರ್ದಿಷ್ಟ ಕಾಲದವರೆಗೆ ಅಜ್ಞಾತವಾಗಿ ಉಳಿದ ಉದಾಹರಣೆ ಇಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟ ಬಳಿಕವೂ ಎಎಪಿ ಮುಖ್ಯಮಂತ್ರಿ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಅವರು, ’ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್‌ ಅವರನ್ನು ಕೆಳಗಿಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸ್ವತಃ ಹೈಕೋರ್ಟ್‌ ತಿರಸ್ಕರಿಸಿದೆ. ಕೇಜ್ರಿವಾಲ್‌ ಅವರು ಮುಖ್ಯಮಂತ್ರಿ ಆಗಿದ್ದರು. ಅವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ’ ಎಂದು ಹೇಳಿದರು.

ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿಗಳ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಪಿಐಎಲ್‌ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಯಾವುದೇ ರಾಜ್ಯದಲ್ಲಾದರೂ ಮುಖ್ಯಮಂತ್ರಿಯು ಕೇವಲ ಉತ್ಸವಮೂರ್ತಿಯಲ್ಲ. ಬಿಕ್ಕಟ್ಟಿನ ಪರಿಸ್ಥಿತಿ ನಿರ್ವಹಿಸುವ ನಿಟ್ಟಿನಲ್ಲಿ ಆ ಸ್ಥಾನದಲ್ಲಿರುವವರು ದಿನದ 24 ಗಂಟೆಯೂ ಜನರ ಸಂಪರ್ಕಕ್ಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸಂಜಯ್‌ ಸಿಂಗ್ ಅವರು, ’ಕೇಜ್ರಿವಾಲ್‌ ಅವರು ನೈಜ ದೇಶಪ್ರೇಮಿ. ಅವರ ದೇಶಪ್ರೇಮವನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರು ರಾಜಕೀಯ ಸಂಚಿನ ಸಂತ್ರಸ್ತರು. ಅವರು ಯಾವುದೇ ಹುದ್ದೆಯ ಲಾಲಾಸೆ ಹೊಂದಿಲ್ಲ. ಮೌಲ್ಯಗಳ ಪ್ರಶ್ನೆ ಬಂದಾಗ ಅವರು ಅಧಿಕಾರಕ್ಕೇರಿದ ಕೇವಲ 49 ದಿನಗಳಲ್ಲಿ ರಾಜೀನಾಮೆ ನೀಡಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT