ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿಮಾಡಿ ಸಮಾನತೆಯನ್ನು ಚೂರುಚೂರು ಮಾಡಲಾಗಿದೆ: ಕೇರಳ ಸಿಎಂ ಪಿಣರಾಯಿ

Published 24 ಮಾರ್ಚ್ 2024, 4:38 IST
Last Updated 24 ಮಾರ್ಚ್ 2024, 4:38 IST
ಅಕ್ಷರ ಗಾತ್ರ

ಕಾಸರಗೋಡು: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಿಂದಾಗಿ ಸಂವಿಧಾನದಲ್ಲಿ ಹೇಳಲಾದ ಸಮಾನತೆ ಚೂರುಚೂರುರಾಗಿದೆ ಎಂದು ಹೇಳಿದರು.

ಇಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಿದ್ಧಾಂತ ಹಾಗೂ ರಚನೆ ಅಡಾಲ್ಫ್ ಹಿಟ್ಲರ್‌ ಹಾಗೂ ಬೆನಿಟೊ ಮುಸೊಲಿನಿ ಅವರ ಪ್ಯಾಶಿಸಂನಿಂದ ಅಳವಡಿಸಿಕೊಳ್ಳಲಾಗಿದೆ. ಆರ್‌ಎಸ್‌ಎಸ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಬಿಜೆಪಿ ಸರ್ಕಾರ ಜಾತ್ಯತೀತತೆಯನ್ನು ನಂಬುವುದಿಲ್ಲ ಎಂದು ಹೇಳಿದರು.

‘ನಮ್ಮದು ಜಾತ್ಯತೀತ ರಾಷ್ಟ್ರ. ಆರ್‌ಎಸ್‌ಎಸ್ ಯಾವತ್ತೂ ಜಾತ್ಯತೀತತೆಯನ್ನು ಒಪ್ಪಿಕೊಂಡಿಲ್ಲ. ಭಾರತವನ್ನು ಧರ್ಮಾಧಿಕಾರವನ್ನಾಗಿ ಮಾಡಲು ಮತ್ತು ಜಾತ್ಯತೀತತೆಯನ್ನು ತೊಡೆದುಹಾಕಲು ಬಯಸುತ್ತದೆ. ಅವರು ನಮ್ಮನ್ನು ಶತ್ರುಗಳು ಎಂದು ಪರಿಗಣಿಸುತ್ತಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಹಾಗೂ ಕಮ್ಯುನಿಸ್ಟರನ್ನು ಆಂತರಿಕ ಶತ್ರುಗಳು ಎಂದು ಅವರು ಘೋಷಿಸಿದ್ದಾರೆ’ ಎಂದರು.

ತಮ್ಮ ಪುಸ್ತಕವೊಂದರಲ್ಲಿ ಕ್ರೈಸ್ತರನ್ನು, ಮುಸಲ್ಮಾನರು ಹಾಗೂ ಕಮ್ಯುನಿಸ್ಟರು ಈ ದೇಶದ ಆಂತರಿಕ ವೈರಿಗಳು ಎಂದು ಗೋಲ್ವಾಲ್ಕರ್‌ ಹೇಳಿದ್ದನ್ನು ಅವರು ಉಲ್ಲೇಖಿಸಿದರು.

‘ಆರ್‌ಎಸ್‌ಎಸ್‌ ಸಿದ್ಧಾಂತವು ಯಾವುದೇ ಹಳೆಯ ಪುಸ್ತಕ, ಪುರಾಣ, ವೇದಗಳು ಅಥವಾ ಮನುಸ್ಕೃತಿಯಿಂದ ಪ್ರೇರಣೆಗೊಂಡಿದ್ದು ಅಲ್ಲ. ಅದು ಹಿಟ್ಲರ್‌ನಿಂದ ತೆಗೆದುಕೊಂಡಿದ್ದು. ಹಿಟ್ಲರ್‌ನ ಆಡಳಿತದಲ್ಲಿ ನಡೆದ ನರಮೇಧವನ್ನು ನೋಡಿ ಇಡೀ ಮನುಕುಲವೇ ದಿಗ್ಭ್ರಮೆಗೊಳಗಾಗಿದೆ. ಆದರೆ ಹಿಟ್ಲರ್‌ನ ಕೆಲಸಗಳನ್ನು ಭಾರತದಲ್ಲಿ ಆರ್‌ಎಸ್‌ಎಸ್‌ ಹೊಗಳುತ್ತದೆ. ದೇಶದ ಆಂತರಿಕ ಸಮಸ್ಯೆಗಳನ್ನು ಜರ್ಮನಿಯ ಹಿಟ್ಲರ್‌ನನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಘೋಷಿಸಿದ್ದಾರೆ. ಆರ್‌ಎಸ್‌ಎಸ್‌ ನಾಯಕರು ಮುಸೊಲಿನಿಯನ್ನು ಭೇಟಿ ಮಾಡಿ ಫಾಸಿಸ್ಟ್ ಸಾಂಸ್ಥಿಕ ರಚನೆಯನ್ನು ಸ್ವೀಕರಿಸಿದ್ದರು’ ಎಂದು ಅವರು ಹೇಳಿದರು.

ಭಾರತದ ಬಲ ಏಕತೆ ಹಾಗೂ ವಿವಿಧತೆಯಲ್ಲಿದೆ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT