ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಭೂಕುಸಿತ: ನೆಲೆ ಕಳೆದುಕೊಂಡ ಬದುಕು

Last Updated 18 ಅಕ್ಟೋಬರ್ 2021, 4:09 IST
ಅಕ್ಷರ ಗಾತ್ರ

ತಿರುವನಂತಪುರ: ಕೂಟ್ಟಿಕಲ್‌ನ ಪಶ್ಚಿಮ ಘಟ್ಟದ ಪರ್ವತಶ್ರೇಣಿಗೆ ಹೊಂದಿಕೊಂಡಂತೆ ಇರುವ ಕುಗ್ರಾಮದ ವೃದ್ಧ ಮಹಿಳೆಯೊಬ್ಬರು, ಭಾನುವಾರ ಬೆಳಿಗ್ಗೆ ಅಳುತ್ತಲೇ ಅತ್ತಿಂದಿತ್ತ ಓಡಾಡುತ್ತಿದ್ದರು. ತಮಗೆದುರಾದ ಎಲ್ಲರ ಎದುರೂ ‘ನಾನು ಎಲ್ಲವನ್ನೂ ಕಳೆದುಕೊಂಡೆ. ನಾನೀಗ ಎಲ್ಲಿಗೆ ಹೋಗಲಿ? ನನಗೆ ಆಸರೆಯಾರು?’ ಎಂದು ಹಲುಬುತ್ತಿದ್ದರು.

ಶನಿವಾರ ಸುರಿದ ಸುರಿದ ಮಳೆಯು ಆ ಮಹಿಳೆಯ ಮನೆ ಸೇರಿದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಮೈಮೇಲೆ ಇರುವ ಹರಿದ ಸೀರೆಯೊಂದನ್ನು ಬಿಟ್ಟು ಆಕೆಯ ಬಳಿ ಬೇರಾವ ವಸ್ತ್ರವೂ ಉಳಿದಿಲ್ಲ. ಕೂಡಿಟ್ಟಿದ್ದ ಪುಡಿಗಾಸು ಹಾಗೂ ದವಸ–ಧಾನ್ಯಗಳೆಲ್ಲ ನೀರುಪಾಲಾಗಿವೆ.

ಗುಡಿಸಲು ಕಟ್ಟಿಕೊಟ್ಟಲು ತನಗೆ ತುಸು ಜಾಗ ಕೊಡುವಂತೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಮಾಡಿದ ವೃದ್ಧೆ, ‘ನನ್ನ ಇಬ್ಬರು ಹೆಣ್ಣುಮಕ್ಕಳ ಮನೆಗಳೂ ಮುಳುಗಿಹೋಗಿವೆ. ಎಲ್ಲಿಗೆ ಹೋಗಬೇಕೆಂಬುದೇ ತಿಳಿಯುತ್ತಿಲ್ಲ. ಚರ್ಚ್‌ ಬಳಿ ಹೋಗುತ್ತೇನೆ; ಅಲ್ಲಿಯೇನಾದರೂ ಜಾಗ ಸಿಗಬಹುದೇ ನೋಡುತ್ತೇನೆ’ ಎಂದು ತಮಗೆ ಎದುರಾದ ಮಾಧ್ಯಮದವರ ಮುಂದೆ ಹೇಳಿಕೊಂಡರು.

ಈ ವೃದ್ಧೆಯಂತೆಯೇ ಕೋಟಯಂ ಜಿಲ್ಲೆಯ ಕೂಟ್ಟಿಕಲ್‌ನಲ್ಲಿ ಹಲವಾರು ಜನರು ದಿಢೀರನೇ ನೆಲೆ ಕಳೆದುಕೊಂಡಿದ್ದಾರೆ. ಶನಿವಾರ ಸುರಿದ ಮಳೆಯಿಂದ ಹಾಗೂ ಭೂಕುಸಿತದಿಂದ ಅಲ್ಲಿನ ಜನರ ಬದುಕೇ ಬದಲಾಗಿದೆ. ಮನೆ ಕಳೆದುಕೊಂಡ ಆ ಊರವರಿಗೆ ಆರೈಕೆ ಕೇಂದ್ರಗಳಲ್ಲಿ ಆಸರೆ ಸಿಕ್ಕಿದೆ.

ತಮ್ಮ ಮನೆಗೆ ಏಕಾಏಕಿ ನುಗ್ಗಿದ ನೀರಿನಿಂದ ತಾವು, ತಮ್ಮ ಪತ್ನಿ ಮತ್ತು ಮಕ್ಕಳ ಜೀವ ಉಳಿದಿದ್ದೇ ಅದೃಷ್ಟ ಎನ್ನುವ ಸ್ಥಳೀಯರೊಬ್ಬರು, ತಾವು ಉಟ್ಟಿದ್ದ ಧೋತಿಯನ್ನು ತೋರಿಸಿ, ‘ಇದನ್ನು ಪಕ್ಕದ ಮನೆಯವರು ಕೊಟ್ಟಿದ್ದು’ ಎಂದು ಹೇಳುತ್ತ ಭಾವುಕರಾದರು.

ದಶಕದಲ್ಲೇ ಇಷ್ಟು ದೊಡ್ಡ ಮಳೆಯನ್ನು ನೋಡಿರಲಿಲ್ಲ ಎನ್ನುತ್ತಿರುವ ಸ್ಥಳೀಯರು, 2018ರಲ್ಲಿ ಬಂದಿದ್ದ ಪ್ರವಾಹ ಕೂಡ ಇಷ್ಟು ಹಾನಿ ಮಾಡಿರಲಿಲ್ಲ ಎಂದು ಹೇಳುತ್ತಿದ್ದಾರೆ.

ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಮಕ್ಕಳೂ ಸೇರಿದಂತೆ, ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕುಟುಂಬದ ನಾಲ್ವರು ತಮ್ಮ ಕಣ್ಣಮುಂದೆಯೇ ಕೊಚ್ಚಿ ಹೋಗಿದ್ದನ್ನು ಕಂಡಿರುವ ರಾಜಮ್ಮ, ಆ ಆಘಾತದಿಂದ ಹೊರಬಂದಿಲ್ಲ. ‘ಬೆಟ್ಟದ ಕಡೆಯಿಂದ ನುಗ್ಗಿ ಬರುತ್ತಿದ್ದ ನೀರನ್ನು ಕಂಡೊಡನೇ ನಾನು ಅವರಿಗೆ ಎಚ್ಚರಿಸಿದೆ. ಆದರೆ, ಅಷ್ಟರಲ್ಲೇ ಬಂಡೆಗಳು ಕುಸಿದು ಬೀಳತೊಡಗಿದವು. ಪ್ರವಾಹದೊಂದಿಗೇ ಅವರೂ ಕೊಚ್ಚಿ ಹೋದರು...’ ಎಂದು ಆ ಘಟನೆಯನ್ನು ನೆನೆದು ಕಣ್ಣೀರಾದರು.

10ಕ್ಕೂ ಹೆಚ್ಚು ದೊಡ್ಡ ಸೇತುವೆಗಳು, ಅಷ್ಟೇ ಸಂಖ್ಯೆಯ ಮರದ ಸೇತುವೆಗಳು ಕೊಚ್ಚಿ ಹೋಗಿವೆ ಎಂದು ಎಂದು ಪರಿಹಾರ ಕಾರ್ಯದಲ್ಲಿ ಕೈಜೋಡಿಸಿರುವ ಸ್ಥಳೀಯರಾದ ಜಾರ್ಜ್ ಹೇಳಿದರು.

ಕೂಟ್ಟಿಕಲ್‌ ಹಾಗೂ ಕೊಕ್ಕಯಾರ್‌ ಪಂಚಾಯಿತಿ ವ್ಯಾಪ್ತಿಯಲ್ಲಿ12 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಸೇನಾಪಡೆ, ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಯು ಸ್ಥಳೀಯರೊಡಗೂಡಿ ಭಾನುವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಮಧ್ಯೆ, ಕೇರಳದಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದಾಗಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಪರಿಸರ ವಿರೋಧಿ ಚಟುವಟಿಕೆಗಳ ಕಡಿವಾಣಕ್ಕೆ ಆಗ್ರಹಿಸುವ ಅಭಿಯಾನವು ಮತ್ತೆ ದನಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT