ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ನೀರಿನ ಸೌಕರ್ಯ ಒದಗಿಸಿ: ಕೇರಳ ಹೈಕೋರ್ಟ್‌

Published 25 ಡಿಸೆಂಬರ್ 2023, 15:54 IST
Last Updated 25 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮಾರ್ಗ ಮಧ್ಯೆ ಇಡತ್ತಾವಳಂನಲ್ಲಿ ನೀರು, ಲಘು ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿರುವಾಂಕೂರು ದೇವಸ್ಥಾನ ಮಂಡಳಿಗೆ (ಟಿಡಿಬಿ) ಕೇರಳ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಶಬರಿಮಲೆಗೆ ತೆರಳುವ ರಸ್ತೆಗಳಲ್ಲಿ ಮಕ್ಕಳು ಸೇರಿದಂತೆ ಭಕ್ತರು ಆಹಾರ ಮತ್ತು ನೀರು ಇಲ್ಲದೆ ಸುಮಾರು 12 ತಾಸುಗಳವರೆಗೆ ಪರದಾಡಿದರು ಎಂಬ ವರದಿಗಳನ್ನು ಗಮನಿಸಿದ ನ್ಯಾಯಾಲಯ ವಿಶೇಷ ಕಲಾಪ ನಡೆಸಿತು. 

ಭಕ್ತಾದಿಗಳು ಕೆಲ ಸಮಯ ವಿರಮಿಸುವ ಸ್ಥಳವಾದ ಇಡತ್ತಾವಳಂನಲ್ಲಿ ಅವರಿಗೆ ನೀರು, ಲಘು ಆಹಾರ ಮತ್ತು ಇತರ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದು ತಿರುವಾಂಕೂರು ದೇವಸ್ಥಾನ ಮಂಡಳಿಗೆ ನ್ಯಾಯಮೂರ್ತಿಗಳಾದ ಅನಿಲ್‌ ಕೆ. ನರೇಂದ್ರನ್‌ ಮತ್ತು ಜಿ. ಗಿರೀಶ್‌ ಅವರನ್ನು ಒಳಗೊಂಡ ಪೀಠವು ಸೂಚಿಸಿದೆ ಎಂದು ವಕೀಲರೊಬ್ಬರು ಹೇಳಿದರು.

ದೇವಾಲಯದ ಒಳಗೆ ಮತ್ತು ಹೊರಗೆ ಜನರನ್ನು ನಿಯಂತ್ರಿಸುವ ಕುರಿತು ಮೇಲ್ವಿಚಾರಣೆ ನಡೆಸಬೇಕು, ಅಗತ್ಯ ಬಿದ್ದರೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನೇಮಿಸಬೇಕು ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೂ ಪೀಠವು ನಿರ್ದೇಶನ ನೀಡಿತು.

ಶಬರಿಮಲೆಯಲ್ಲಿ ಭಾರಿ ದಟ್ಟಣೆಯ ಕಾರಣ ವಿವಿಧೆಡೆ ರಸ್ತೆಗಳಲ್ಲಿ ಭಕ್ತಾದಿಗಳ ವಾಹನಗಳನ್ನು ತಡೆ ಹಿಡಿಯಲಾಗಿದೆ ಎಂದೂ ವರದಿಗಳು ಹೇಳಿವೆ.

ಯಾವುದೇ ಆಹಾರ ಮತ್ತು ನೀರಿನ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ತಮ್ಮನ್ನು ತಡೆದು ನಿಲ್ಲಿಸಲಾಗಿದೆ ಎಂದು ತಮಿಳುನಾಡು ಮತ್ತು ಕರ್ನಾಟಕದಿಂದ ಬಂದಿರುವ ಭಕ್ತರು ಸುದ್ದಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ. ಶಬರಿಮಲೆಯಲ್ಲಿ ಸನ್ನಿಧಾನಂನಲ್ಲಿ ಕೂಡ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವುದಾಗಿ ಭಕ್ತರು ದೂರುತ್ತಿರುವುದು ಕೂಡ ಕಂಡು ಬಂದಿದೆ.

ಭಾನುವಾರ ದರ್ಶನಕ್ಕಾಗಿ 1.2 ಲಕ್ಷ ಜನರು ಬಂದಿದ್ದರು. ಸೋಮವಾರ ಕೂಡ ಇಷ್ಟೇ ಸಂಖ್ಯೆಯ ಜನರು ಇದ್ದರು. ಈ ಸಲ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಂದಿದ್ದಾರೆ ಎಂದು ಟಿಡಿಬಿ ಮೂಲಗಳು ಹೇಳಿವೆ. 

ಆಹಾರ ಮತ್ತು ನೀರು ಲಭ್ಯವಿರುವ ಕಡೆಯೇ ವಾಹನಗಳ ನಿಲುಗಡೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್‌. ಪ್ರಶಾಂತ್‌ ಸುದ್ದಿಗಾರರಿಗೆ ತಿಳಿಸಿದರು.

‘ಪಟ್ಟಣಂತಿಟ್ಟ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ನೀರು– ಆಹಾರ ಸಿಗುವ ಕಡೆಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಅವರು ಹೇಳಿದ್ದಾರೆ. ಅಯ್ಯಪ್ಪ ದೇವರ ದರ್ಶನ ಪಡೆಯದೆ ಯಾರೂ ಹಿಂತಿರುಗುವುದಿಲ್ಲ ಎಂದು ನಾವು ಭಾವಿಸುತ್ತೇವೆ’ ಎಂದರು.

ಮಂಡಲ ಪೂಜೆ ಸಂದರ್ಭದಲ್ಲಿ ಹೆಚ್ಚು ಭಕ್ತಾದಿಗಳು ಇರುತ್ತಾರೆ. ಈ ಕಾರಣ ಪಾರ್ಕಿಂಗ್‌ ಸ್ಥಳಗಳ ಸಂಖ್ಯೆಯನ್ನು 7,000ದಿಂದ 8,000ಕ್ಕೆ ಹೆಚ್ಚಿಸಲಾಗಿದೆ
ಪಿ.ಎಸ್‌. ಪ್ರಶಾಂತ್‌,ಟಿಡಿಬಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT