ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಣಿ ಬಲಿ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇರಳ ಆಕ್ರೋಶ

ಕರ್ನಾಟಕದ ಡಿಸಿಎಂ ಆರೋಪ ನಿರಾಧಾರ, ಖಂಡನಾರ್ಹ: ಮಲಬಾರ್ ದೇವಸ್ವಂ
Published 31 ಮೇ 2024, 14:12 IST
Last Updated 31 ಮೇ 2024, 14:12 IST
ಅಕ್ಷರ ಗಾತ್ರ

ತಿರುವನಂತಪುರ: ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮನ್ನು ಗುರಿಯಾಗಿಸಿಕೊಂಡು ಉತ್ತರ ಕೇರಳದ ದೇವಸ್ಥಾನದ ಬಳಿ ಪ್ರಾಣಿ ಬಲಿ (ಶತ್ರು ಭೈರವಿ ಯಾಗ) ನಡೆಸಲಾಗುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಕೇರಳದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಯು ಉತ್ತರ ಕೇರಳದ ಹಲವು ದೇವಸ್ಥಾನಗಳಲ್ಲಿ ಈ ಹಿಂದೆ ನಡೆಯುತ್ತಿದ್ದ ಪ್ರಾಣಿ ಬಲಿ ವಿಚಾರವನ್ನು ಮುನ್ನೆಲೆಗೆ ತಂದಿದೆ.

ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ರಾಜ್ಯ ಪ್ರೌಢ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು, ‘ಡಿ.ಕೆ. ಶಿವಕುಮಾರ್ ಅವರ ಆರೋಪವು ಅರ್ಥಹೀನವಾದದ್ದು. ಕೇರಳದಲ್ಲಿ ಇಂಥವುಗಳೆಲ್ಲ ನಡೆಯುವುದಿಲ್ಲ. ದೇಶದ ಇತರೆ ಭಾಗಗಳಲ್ಲಿ ಸಮಾಜವನ್ನು ಮತ್ತೆ ಕತ್ತಲೆ ಕೂಪಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಇಂಥ ಪ್ರಯತ್ನಗಳು ನಮ್ಮ ರಾಜ್ಯದಲ್ಲೂ ನಡೆಯುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಇದೇ ವೇಳೆ ತಿಳಿಸಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಆಧಾರರಹಿತ ಹೇಳಿಕೆ ನೀಡುವುದು ದುರದೃಷ್ಟಕರ ಮತ್ತು ಖಂಡನಾರ್ಹ. ರಾಜ್ಯದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿದ ಬಳಿಕ ಯಾವುದೇ ದೇವಸ್ಥಾನಗಳಲ್ಲಿ ಪ್ರಾಣಿಬಲಿ ಮತ್ತು ಇಂಥ ಯಾವುದೇ ಆಚರಣೆಗಳನ್ನು ನಿಲ್ಲಿಸಲಾಗಿದೆ’ ಎಂದು ಉತ್ತರ ಕೇರಳದ ದೇವಸ್ಥಾನಗಳನ್ನು ನಿರ್ವಹಿಸುವ ಮಲಬಾರ್ ದೇವಸ್ವಂ ತಿಳಿಸಿದೆ.

ಖಾಸಗಿ ವ್ಯಕ್ತಿಗಳ ನಿರ್ವಹಣೆಯಲ್ಲಿರುವ ದೇವಸ್ಥಾನ ಮತ್ತು ಪೂಜಾರಿಗಳ ಮನೆಯಲ್ಲಿ ‘ಶತ್ರು ಸಂಹಾರ ಯಾಗ’ದಂಥ ಆಚರಣೆಗಳು ನಡೆಯಬಹುದು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಆಚರಣೆಗಳು ನಡೆಯುವ ಸಾಧ್ಯತೆ ಇಲ್ಲ. ಒಂದು ವೇಳೆ ನಡೆದರೆ, ಮಾಹಿತಿ ಸೋರಿಕೆಯಾಗಿ ಕಾನೂನು ಕ್ರಮಕ್ಕೆ ಸಿಲುಕಬಹುದು ಎಂಬ ಭಯವಿರುತ್ತದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧದ ಹೊರತಾಗಿಯೂ, ಕೆಲವು ವ್ಯಕ್ತಿಗಳ ಮನೆಯಲ್ಲಿ ನರಬಲಿಯಂಥ ಘಟನೆಗಳು ನಡೆದಿದ್ದವು ಎಂಬ ಆರೋಪವಿದೆ. 2022ರಲ್ಲಿ ಪತ್ತನಂತಿಟ್ಟದ ಎಲಂಥೂರ್ ಎಂಬಲ್ಲಿ ಇಬ್ಬರು ಮಹಿಳೆಯರ ‘ನರಬಲಿ’ ನಡೆದಿತ್ತು ಎಂಬ ಆರೋಪವು ಕೇಳಿಬಂದಿತ್ತು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನನ್ನು ಗುರಿಯಾಗಿಸಿಕೊಂಡು, ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಕೆಂಪು ಬಣ್ಣದ 21 ಮೇಕೆ, ಮೂರು ಎಮ್ಮೆ, ಕಪ್ಪು ಬಣ್ಣದ 21 ಕುರಿ ಮತ್ತು ಐದು ಹಂದಿ ಹೀಗೆ ಪಂಚ ಬಲಿ ಮೂಲಕ ಈ ಮಾಂತ್ರಿಕ ಯಾಗ ನಡೆಯುತ್ತಿದೆ’ ಎಂದು ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT