ನವದೆಹಲಿ: ಅಂತರರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲದ ಪ್ರಮುಖ ಸದಸ್ಯನನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗಿದೆ. ಈತನ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿಯಾಗಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುನಿಯಾದ್ ಅಲಿಖಾನ್‌ನನ್ನು ಎನ್‌ಐಎ ಮತ್ತು ಇಂಟರ್‌ಪೋಲ್ ಸಹಯೋಗದಲ್ಲಿ ಸಿಬಿಐ ಭಾರತಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇಯಿಂದ ಜೈಪುರ್ ವಿಮಾನನಿಲ್ದಾಣಕ್ಕೆ ಬಂದಿಳಿದ ಈತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದರು.
ಚಿನ್ನದ ಗಟ್ಟಿಗಳನ್ನು ರಿಯಾದ್, ಸೌದಿ ಅರೇಬಿಯದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುವಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು ಎಂದು ಸಿಬಿಐನ ವಕ್ತಾರರು ತಿಳಿಸಿದ್ದಾರೆ.
ಇತರ ಇಬ್ಬರು ಆರೋಪಿಗಳಾಗಿದ್ದ ಶೋಕತ್ ಅಲಿ ಮತ್ತು ಮೊಹಬ್ಬತ್ ಅಲಿ ಅವರನ್ನು ಸೌದಿ ಅರೇಬಿಯದಿಂದ ಕ್ರಮವಾಗಿ 2024ರ ಏಪ್ರಿಲ್ 3 ಮತ್ತು 2023ರ ಆಗಸ್ಟ್ 17ರಂದು ಕರೆತರಲಾಗಿತ್ತು.