ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ವಿದ್ಯಾರ್ಥಿನಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ತಲ್‌ತಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, 'ಆರ್.ಜಿ.ಕರ್ ಆಸ್ಪತ್ರೆ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವ ಸ್ಟೋರಿಗಳನ್ನು 'ಕೀರ್ತಿಸೋಷಿಯಲ್' (Kirtisocial) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ದೂರು ದಾಖಲಾಗಿತ್ತು' ಎಂದು ತಿಳಿಸಿದ್ದಾರೆ.
'ಮುಖ್ಯಮಂತ್ರಿ ಅವರ ವಿರುದ್ಧ ಅವಹೇಳನಕಾರಿ ವಿಚಾರ ಮತ್ತು ಅವರಿಗೆ ಜೀವ ಬೆದರಿಕೆ ಒಡ್ಡುವ ಅಂಶಗಳನ್ನು ಒಳಗೊಂಡ ಎರಡು ಸ್ಟೋರಿಗಳನ್ನೂ ಆರೋಪಿ ಹಂಚಿಕೊಂಡಿದ್ದ. ಪ್ರಚೋದನಕಾರಿಯಾಗಿದ್ದ ಆ ಸ್ಟೋರಿಗಳು, ಸಮಾಜದಲ್ಲಿ ಕಲಹ ಮತ್ತು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವ ಸಾಧ್ಯತೆ ಇತ್ತು' ಎಂದೂ ಅವರು ಹೇಳಿದ್ದಾರೆ.