ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ: ಕಾರಿನಲ್ಲಿ ಹೋಗುತ್ತಿದ್ದ ಕುಕಿ ಸಮುದಾಯದ ಮಾಜಿ ಸೈನಿಕನ ಹತ್ಯೆ

Published : 9 ಸೆಪ್ಟೆಂಬರ್ 2024, 6:25 IST
Last Updated : 9 ಸೆಪ್ಟೆಂಬರ್ 2024, 7:10 IST
ಫಾಲೋ ಮಾಡಿ
Comments

ಇಂಫಾಲ್, ಗುವಾಹಟಿ: ಮೈತೇಯಿ ಸಮುದಾಯದವರ ಪ್ರಾಬಲ್ಯವಿರುವ ಪಶ್ಚಿಮ ಇಂಫಾಲ್ ಜಿಲ್ಲೆಯ ಸೆಕ್‌ಮಾಯಿನಲ್ಲಿ ಭಾನುವಾರ ರಾತ್ರಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಮಾಜಿ ಸೈನಿಕರೊಬ್ಬರನ್ನು ಬಡಿದು ಹತ್ಯೆ ಮಾಡಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತ ವ್ಯಕ್ತಿ ಕುಕಿ ಸಮುದಾಯದವರಾಗಿದ್ದು, ಕಾಂಗ್‌ಪೊಕ್ಪಿ ಜಿಲ್ಲೆಯ ಶ್ಯಾರೊನ್‌ ವೆಂಗ್‌ನ ನಿವಾಸಿ ಲಿಮ್ಲಾಲ್‌ ಮೆಟ್‌ ಎಂದು ಗುರುತಿಸಲಾಗಿದೆ.

ಮೃತ ಯೋಧರ ಪತ್ನಿ ಕೆಲವು ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಮಾಜಿ ಯೋಧ, ಮಗನ ಜತೆ ವಾಸಿಸುತ್ತಿದ್ದರು ಎಂದು ಕುಕಿ ಸಂಘಟನೆಗಳು ತಿಳಿಸಿವೆ. ಆದರೆ ಘಟನೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಶಾಲೆಗಳು ಸ್ಥಗಿತ, ಪರೀಕ್ಷೆ ಮುಂದೂಡಿಕೆ: ಸೆ.1ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಮೈತೇಯಿ ಸಂಘಟನೆಗಳು ಇಂಫಾಲ್ ಕಣಿವೆ ಬಂದ್‌ಗೆ ಕರೆನೀಡಿವೆ.

ಇದರ ಬೆನ್ನಲ್ಲೇ, ಮಣಿಪುರ ಸರ್ಕಾರವು ಇಂಫಾಲ್‌ ಕಣಿವೆ ಪ್ರದೇಶ ದಲ್ಲಿರುವ ಶಾಲಾ, ಕಾಲೇಜುಗಳಿಗೆ ರಜೆ ನೀಡಿದೆ. ಸೋಮವಾರ ಹಾಗೂ ಮಂಗಳವಾರ ನಿಗದಿಯಾಗಿದ್ದ ಮಣಿಪುರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಿದೆ.

ಪ್ರತಿಭಟನೆ: ರಾಜ್ಯದಲ್ಲಿ ಇತ್ತೀಚಿಗೆ ನಡೆದ ಡ್ರೋನ್‌ ದಾಳಿಯನ್ನು ಖಂಡಿಸಿ ಸೋಮವಾರ ಬೆಳಿಗ್ಗೆ ರಾಜಭವನ, ಮುಖ್ಯಮಂತ್ರಿ ನಿವಾಸದ ಸಮೀಪ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಭದ್ರತಾ ಪಡೆಗಳು ಹಲವು ಸುತ್ತಿನ ಅಶ್ರುವಾಯು ಪ್ರಯೋಗಿಸಿ, ಗುಂಪು ಚದುರಿಸಿತು. 

ಇಲ್ಲಿನ ಟಿಡ್ಡಿಂ ರಸ್ತೆಯಲ್ಲಿ ಸುಮಾರು 3 ಕಿ.ಮೀ ಉದ್ದ ಸಾಗಿಬಂದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಪೊಲೀಸ್‌ ಇಲಾಖೆಯ ಕೇಂದ್ರ ಕಚೇರಿ, ರಾಜ್ಯ ಸಚಿವಾಲಯ ಹಾಗೂ ಬಿಜೆಪಿ ಕಚೇರಿ ಸಮೀಪ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದರು. ಗುಂಪು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. 

ವಿದ್ಯಾರ್ಥಿಗಳು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌, ರಾಜ್ಯಪಾಲ ಎಲ್‌. ಆಚಾರ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾತನಾಡಿದ ವಿದ್ಯಾರ್ಥಿ ಪ್ರತಿನಿಧಿಗಳು, ಆರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ವಿಫಲರಾದ ಡಿಜಿಪಿ ಹಾಗೂ ಭದ್ರತಾ ಸಲಹೆಗಾರರನ್ನು ತಕ್ಷಣವೇ ಹುದ್ದೆಯಿಂದ ತೆರವುಗೊಳಿಸಬೇಕು. ಗೃಹ ಇಲಾಖೆಯು ಉಸ್ತುವಾರಿ ಏಕೀಕೃತ ಕಮಾಂಡ್‌ ವ್ಯವಸ್ಥೆಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.

ಪಶ್ಚಿಮ ಇಂಫಾಲ್‌ ಜಿಲ್ಲೆಯ ಕೌಟ್ರಕ್‌ ಗ್ರಾಮದಲ್ಲಿ ಸೆ.1ರಂದು ರಿಮೋಟ್‌ ನಿಯಂತ್ರಿತ ಡ್ರೋನ್‌ ದಾಳಿಯಿಂದ ಇಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದರು. ಮರುದಿನ ಸೆಂಜಮ್‌ ಚಿರಾಂಗ್‌ ಗ್ರಾಮದಲ್ಲಿ ಮತ್ತೆ ಡ್ರೋನ್‌ ಮೂಲಕ ದಾಳಿ ನಡೆದಿದ್ದರಿಂದ ಮೂವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT