ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆಗೆ ಕಾನೂನು ಆಯೋಗ ಶಿಫಾರಸು ಸಾಧ್ಯತೆ

Published 28 ಫೆಬ್ರುವರಿ 2024, 15:26 IST
Last Updated 28 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ಸಂವಿಧಾನದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ ಹೊಸ ಅಧ್ಯಾಯವನ್ನು ಸೇರಿಸಲು ಹಾಗೂ 2029ರ ಮಧ್ಯದಲ್ಲಿ ದೇಶದಾದ್ಯಂತ ಲೋಕಸಭೆ, ರಾಜ್ಯಗಳ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಕಾನೂನು ಆಯೋಗ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಏಕಕಾಲದ ಚುನಾವಣೆಗಳಿಗೆ ಸಂಬಂಧಿಸಿದಂತೆ ಹೊಸ ಅಧ್ಯಾಯ ಅಥವಾ ಭಾಗವನ್ನು ಸೇರಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ನಿವೃತ್ತ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರ ನೇತೃತ್ವದ ಆಯೋಗ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಐದು ವರ್ಷಗಳಲ್ಲಿ ವಿಧಾನಸಭೆಗಳ ಅವಧಿಯನ್ನು ‘ಮೂರು ಹಂತಗಳಲ್ಲಿ’ ಹೊಂದಾಣಿಕೆ ಮಾಡಬಹುದು ಎಂದು ಸಮಿತಿ ಶಿಫಾರಸು ಮಾಡಲಿದೆ. ಇದರಿಂದ 2029ರ ಮೇ– ಜೂನ್‌ನಲ್ಲಿ 19ನೇ ಲೋಕಸಭಾ ಚುನಾವಣೆಯ ಜತೆಗೆ ಮೊದಲ ಬಾರಿಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

‌ಹೊಸ ಅಧ್ಯಾಯದಲ್ಲಿ ಏನಿರಲಿದೆ:

ಸಂವಿಧಾನದ ಹೊಸ ಅಧ್ಯಾಯವು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪಂಚಾಯತ್‌ಗಳು ಮತ್ತು ಪುರಸಭೆಗಳಿಗೆ ‘ಏಕಕಾಲಕ್ಕೆ ಚುನಾವಣೆ’, ‘ಏಕಕಾಲಕ್ಕೆ ಚುನಾವಣೆಯ ಸುಸ್ಥಿರತೆ’ ಹಾಗೂ ‘ಸಾಮಾನ್ಯ ಮತದಾರರ ಪಟ್ಟಿ’ಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ವಿವರಿಸಿವೆ.

ವಿಧಾನಸಭೆಗಳ ಐದು ವರ್ಷಗಳ ಅವಧಿಯನ್ನು ಮೂರು ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದು. ಅದರ ಪ್ರಕಾರ ಮೊದಲ ಹಂತದಲ್ಲಿ, ರಾಜ್ಯ ವಿಧಾಸಭೆಗಳ ಅವಧಿಯನ್ನು ಮೂರು ಅಥವಾ ಆರು ತಿಂಗಳವರೆಗೆ ಮೊಟಕುಗೊಳಿಸಬೇಕಾಗುತ್ತದೆ.

ಒಂದು ವೇಳೆ ಸರ್ಕಾರವು ಅವಿಶ್ವಾಸದಿಂದ ಪತನವಾದರೆ ಅಥವಾ ಬಹುಮತ ಕಳೆದುಕೊಂಡರೆ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರ ರಚಿಸಬಹುದು. ಈ ಸೂತ್ರವೂ ಕಾರ್ಯ ನಿರ್ವಹಿಸದಿದ್ದರೆ ಸದನದ ಉಳಿದ ಅವಧಿಗೆ ಹೊಸ ಚುನಾವಣೆಗಳನ್ನು ನಡೆಸಲು ಕಾನೂನು ಆಯೋಗ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಚುನಾವಣೆಗಳು ಘೋಷಣೆಯಾದಾಗ ಯಾವುದೇ ರಾಜ್ಯ ಸರ್ಕಾರಕ್ಕೆ ಇನ್ನೂ ಮೂರು ವರ್ಷಗಳಿದ್ದರೆ, ಸುಸ್ಥಿರತೆಯನ್ನು ಖಚಿತಪಡಿಸಲು ಉಳಿದ ಮೂರು ವರ್ಷಗಳ ಅವಧಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಆಯೋಗದ ಹೊರತಾಗಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಸಂವಿಧಾನ ಮತ್ತು ಕಾನೂನು ಚೌಕಟ್ಟಿನೊಳಗೆ ಏಕಕಾಲದಲ್ಲಿ ಹೇಗೆ ಚುನಾವಣೆ ನಡೆಸಬಹುದು ಎಂಬುದರ ಕುರಿತು ವರದಿ ಸಿದ್ಧಪಡಿಸುತ್ತಿದೆ. 

ಮುಂದಿನ ಲೋಕಸಭಾ ಚುನಾವಣೆಯ ಜತೆಗೆ ಕನಿಷ್ಠ ಐದು ವಿಧಾನಸಭೆಗಳಿಗೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ರಾಜ್ಯಗಳಿಗೆ ಈ ವರ್ಷದ ಕೊನೆಯಲ್ಲಿ ಚುನಾವಣೆಯಗಳು ನಡೆಯಲಿವೆ. 

ಮುಂದಿನ ವರ್ಷ ಬಿಹಾರ, ದೆಹಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದರೆ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ 2026ರಲ್ಲಿ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌ ಮತ್ತು ಮಣಿಪುರದಲ್ಲಿ 2027ರಲ್ಲಿ ಚುನಾವಣೆಗಳು ನಡೆಯಲಿವೆ.

ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌, ಕರ್ನಾಟಕ, ಮಿಜೋರಾಂ, ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಗಳಿಗೆ 2028ರಲ್ಲಿ ಚುನಾವಣೆಗಳು ನಡೆಯಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT