ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು, ಮಂಡಕ್ಕಿ ತಿಂದು ಬದುಕಿದೆವು: ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕನ ಮಾತು

Published 29 ನವೆಂಬರ್ 2023, 13:30 IST
Last Updated 29 ನವೆಂಬರ್ 2023, 13:30 IST
ಅಕ್ಷರ ಗಾತ್ರ

ರಾಂಚಿ: ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಪೈಕಿ ಒಬ್ಬರಾದ ಅನಿಲ್ ಬೆದಿಯಾ ಅವರು ಜೀವ ಉಳಿಸಿಕೊಳ್ಳಲು ಮಂಡಕ್ಕಿ ತಿನ್ನುತ್ತಿದ್ದರು, ಸುರಂಗದಲ್ಲಿನ ಕಲ್ಲು ಸಂದಿಗಳಿಂದ ಜಿನುಗುತ್ತಿದ್ದ ನೀರು ಕುಡಿಯುತ್ತಿದ್ದರು.

ಜಾರ್ಖಂಡ್‌ನ ಈ ಕಾರ್ಮಿಕ ಸುರಂಗವು ಕುಸಿದಾಗ ಸಾವಿನ ಸನಿಹ ಹೋಗಿಬಂದಿದ್ದರು. ‘ಭಾರಿ ಸದ್ದು ಕೇಳಿಸಿತು... ನಾವೆಲ್ಲ ಸುರಂಗದಲ್ಲಿ ಸಮಾಧಿಯಾಗುತ್ತೇವೆ ಎಂದು ಭಾವಿಸಿದ್ದೆವು. ಮೊದಲ ಎರಡು ದಿನ ನಾವು ಯಾವ ಭರವಸೆಯನ್ನೂ ಹೊಂದಿರಲಿಲ್ಲ’ ಎಂದು ಬೆದಿಯಾ ಅವರು ದೂರವಾಣಿ ಮೂಲಕ ತಿಳಿಸಿದರು.

‘ಅದು ದುಃಸ್ವಪ್ನದಂತೆ ಇತ್ತು... ಬಾಯಾರಿಕೆ ಆದಾಗ ಸುರಂಗದಲ್ಲಿ ಜಿನುಗುತ್ತಿದ್ದ ನೀರು ಕುಡಿಯುತ್ತಿದ್ದೆವು’ ಎಂದು ಹೇಳಿದರು. ಅವರು ಈಗ ಆಸ್ಪತ್ರೆಯಲ್ಲಿ ದಾಖಲಾಗಿ, ಚೇತರಿಸಿಕೊಳ್ಳುತ್ತಿದ್ದಾರೆ. ಬೆದಿಯಾ ಅವರು ರಾಂಚಿ ಸಮೀಪದ ಹಳ್ಳಿಯವರು. ಇಲ್ಲಿಂದ 13 ಮಂದಿ ಕಾರ್ಮಿಕರು ಉತ್ತರಕಾಶಿಗೆ ಕೆಲಸಕ್ಕಾಗಿ ತೆರಳಿದ್ದರು. ಆದರೆ ತಮಗೆ ಅಲ್ಲಿ ಕಾದಿರುವುದು ಏನು ಎಂಬುದರ ಸುಳಿವು ಅವರಲ್ಲಿ ಕಿಂಚಿತ್ತೂ ಇರಲಿಲ್ಲ.

ಸುರಂಗ ಕುಸಿದಾಗ ಆ 13 ಮಂದಿಯ ಪೈಕಿ ಮೂವರು ಒಳಗೆ ಸಿಲುಕಿಕೊಂಡರು. 41 ಮಂದಿ ಕಾರ್ಮಿಕರ ಪೈಕಿ 15 ಮಂದಿ ಜಾರ್ಖಂಡ್ ರಾಜ್ಯದ ರಾಂಚಿ, ಗಿರಿಡೀಹ್‌, ಖೂಂಟಿ ಮತ್ತು ಪಶ್ಚಿಮ ಸಿಂಹಭೂಮ್‌ನವರು. ಇವರು ಸುರಕ್ಷಿತವಾಗಿ ಬಂದ ಸುದ್ದಿ ಕೇಳಿದ ನಂತರ ಇಲ್ಲಿನ ಜನ ಸಂಭ್ರಮ ಆಚರಿಸಿದರು.

‘ಸುರಂಗ ಕುಸಿದ ಸರಿಸುಮಾರು 70 ಗಂಟೆಗಳ ನಂತರ ಅಧಿಕಾರಿಗಳು ನಮ್ಮ ಜೊತೆ ಸಂಪರ್ಕ ಸಾಧಿಸಿದಾಗ ನಮ್ಮಲ್ಲಿ ಮೊದಲ ಬಾರಿಗೆ ಭರವಸೆ ಚಿಗುರಿತು’ ಎಂದು ಬೆದಿಯಾ ನೆನಪಿಸಿಕೊಂಡರು. ‘ಸುರಂಗದ ಒಳಗೆ ನಮ್ಮನ್ನು ನಾವು ಸಂತೈಸಿಕೊಳ್ಳುವುದರ ಹೊರತು ಬೇರೆ ಆಯ್ಕೆಗಳೇ ಇರಲಿಲ್ಲ. ಹೊರಗಿನ ಜನ ನಮ್ಮೊಂದಿಗೆ ಸಂಪರ್ಕ ಸಾಧಿಸಿದಾಗ, ನಾವು ಬದುಕಿ ಬರಬಹುದು ಎಂಬ ಬಲವಾದ ಭರವಸೆಯೊಂದು ಮೂಡಿತು’ ಎಂದರು.

ಮೊದಲ 10 ದಿನಗಳನ್ನು ತೀವ್ರ ಆತಂಕದಲ್ಲಿ ಕಳೆದವು. ನಂತರ ಬಾಳೆಹಣ್ಣು, ಸೇಬು, ಕಿತ್ತಲೆ ಹಣ್ಣು, ಅನ್ನ, ದಾಲ್ ಮತ್ತು ಚಪಾತಿ ಇರುತ್ತಿದ್ದ ಊಟ, ಕುಡಿಯುವ ನೀರು ನಿರಂತರವಾಗಿ ಸಿಗಲು ಆರಂಭವಾಯಿತು ಎಂದು ವಿವರಿಸಿದರು. ‘ನಾವು ಎಲ್ಲರೂ ಒಂದಾಗಿ ಪ್ರಾರ್ಥಿಸುತ್ತಿದ್ದೆವು... ದೇವರು ಕೊನೆಗೂ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟ’ ಎಂದು ಅವರು ಭಾವುಕರಾಗಿ ಹೇಳಿದರು.

ಬೆದಿಯಾ ಅವರ ತಾಯಿ ಆತಂಕಗೊಂಡಿದ್ದರು. ಎರಡು ವಾರಗಳಿಂದ ಅವರು ಅಡುಗೆ ಮಾಡಿರಲಿಲ್ಲ. ನೆರೆಹೊರೆಯ ಮಂದಿ ನೀಡಿದ ಆಹಾರ ಸೇವಿಸುತ್ತ ಕಾಲ ತಳ್ಳುತ್ತಿದ್ದರು ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಖಿರಬೇಡಾ ಗ್ರಾಮದಲ್ಲಿ, ಪಾರ್ಶ್ವವಾಯುವಿಗೆ ತುತ್ತಾಗಿರುವ ಶ್ರವಣ್ ಬೆದಿಯಾ ಅವರು ತಮ್ಮ ಮಗ ರಾಜೇಂದ್ರ ಅವರು ಸುರಕ್ಷಿತವಾಗಿ ಹೊರಬಂದ ಸುದ್ದಿ ಕೇಳಿ ಗಾಲಿಕುರ್ಚಿಯಲ್ಲೇ ಕುಳಿತು ಸಂಭ್ರಮ ಆಚರಿಸಿದರು. ಇದೇ ಗ್ರಾಮದ ಸುಖರಾಮ್ ಅವರ ತಾಯಿ ಪಾರ್ವತಿ, ತಮ್ಮ ಮಗ ಸುರಂಗದಲ್ಲಿ ಸಿಲುಕಿರುವ ಸುದ್ದಿ ಗೊತ್ತಾದ ನಂತರ ದುಃಖತಪ್ತರಾಗಿದ್ದರು. ಅವರನ್ನು ಸಂತೈಸಲು ಆಗುತ್ತಲೇ ಇರಲಿಲ್ಲ. ಆದರೆ ಮಂಗಳವಾರ ರಾತ್ರಿ ಶುಭ ಸುದ್ದಿ ಬಂದ ನಂತರದಲ್ಲಿ ಅವರ ಸಂತಸ ಹೇಳತೀರದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT