ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿವ್‌–ಇನ್ ಎಂಬುದು ಎರವಲು ಸಂಬಂಧ: ಹೈಕೋರ್ಟ್

Published 8 ಮೇ 2024, 16:03 IST
Last Updated 8 ಮೇ 2024, 16:03 IST
ಅಕ್ಷರ ಗಾತ್ರ

ಬಿಲಾಸಪುರ: ಲಿವ್–ಇನ್ ಸಂಬಂಧಗಳು ‘ಎರವಲು ಪಡೆದವು’, ಇವು ಭಾರತೀಯ ನಂಬಿಕೆಗಳಿಗೆ ವಿರುದ್ಧವಾಗಿವೆ ಎಂದು ಹೇಳಿರುವ ಛತ್ತೀಸಗಢ ಹೈಕೋರ್ಟ್‌, ಈಗ ಮದುವೆ ಎಂಬ ಪದ್ಧತಿಯು ಜನರನ್ನು ಈ ಹಿಂದಿನಷ್ಟು ಪ್ರಮಾಣದಲ್ಲಿ ಪ್ರಭಾವಿಸುತ್ತಿಲ್ಲ ಎಂದು ಹೇಳಿದೆ.

36 ವರ್ಷ ವಯಸ್ಸಿನ ಮಹಿಳೆಯೊಬ್ಬರ ಜೊತೆಗಿನ ಲಿವ್‌–ಇನ್ ಸಂಬಂಧದಲ್ಲಿ ಜನಿಸಿದ ಮಗುವನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ಕೋರಿ ಪುರುಷನೊಬ್ಬ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್. ಅಗರ್ವಾಲ್ ಅವರು ಇದ್ದ ಪೀಠವು ಈ ಮಾತು ಹೇಳಿದೆ. ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

‘ಸಮಾಜದ ಕೆಲವು ಗುಂಪುಗಳಲ್ಲಿ ಇರುವ ಲಿವ್–ಇನ್ ಸಂಬಂಧವು ಭಾರತೀಯ ಸಂಸ್ಕೃತಿಯಲ್ಲಿ ಈಗಲೂ ಒಂದು ಕಳಂಕ ಎಂದೇ ಪರಿಗಣಿತವಾಗಿದೆ’ ಎಂದು ಪೀಠವು ಹೇಳಿದೆ. ಅರ್ಜಿಯನ್ನು ವಜಾಗೊಳಿಸಿದ ಆದೇಶವನ್ನು ಏಪ್ರಿಲ್‌ 30ರಂದು ನೀಡಲಾಗಿದೆ.

ದಾಂತೇವಾಡ ಜಿಲ್ಲೆಯ ಅಬ್ದುಲ್ ಹಮೀದ್ ಸಿದ್ದಿಕಿ ಎನ್ನುವವರು ತಾವು ಬೇರೊಂದು ಧರ್ಮದ ಮಹಿಳೆಯೊಬ್ಬರ ಜೊತೆ ಲಿವ್–ಇನ್ ಸಂಬಂಧ ಹೊಂದಿದ್ದಾಗಿ, ಆ ಮಹಿಳೆಯು ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿಸಿದ್ದರು. ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಸಿದ್ದಿಕಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿದ ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಆಕೆಯ ಮತವನ್ನು ಬದಲಾಯಿಸದೆಯೇ ತಾನು ಆಕೆಯನ್ನು 2021ರಲ್ಲಿ ಮದುವೆ ಆಗಿದ್ದಾಗಿ ಸಿದ್ದಿಕಿ ತಿಳಿಸಿದ್ದರು. 2021ರಲ್ಲಿ ಮಗು ಜನಿಸಿತು. ಆದರೆ 2023ರಲ್ಲಿ ತಾಯಿ ಮತ್ತು ಮಗು ಕಾಣೆಯಾದರು. ಆಗ ಸಿದ್ದಿಕಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ತಾನು ತನ್ನ ತಾಯಿಯ ಜೊತೆ ವಾಸಿಸುತ್ತಿರುವುದಾಗಿ ಆ ಮಹಿಳೆ ಹೈಕೋರ್ಟ್‌ಗೆ ತಿಳಿಸಿದ್ದರು. ಸಿದ್ದಿಕಿ ಅವರಿಗೆ ಅದಾಗಲೇ ಮದುವೆ ಆಗಿ ಮೂವರು ಮಕ್ಕಳಿದ್ದರು. 

‘ಪಶ್ಚಿಮ ದೇಶಗಳ ಸಾಂಸ್ಕೃತಿಕ ಪ್ರಭಾವದ ಕಾರಣದಿಂದಾಗಿ, ಮದುವೆ ಎನ್ನುವ ಆಚರಣೆಯು ಈ ಹಿಂದೆ ಜನರ ಮೇಲೆ ಹೊಂದಿದ್ದ ಪ್ರಭಾವವು ಈಗ ಉಳಿದಿಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಗೋಚರಿಸುತ್ತದೆ. ಈ ಪರಿವರ್ತನೆ ಹಾಗೂ ವೈವಾಹಿಕ ಹೊಣೆಗಾರಿಕೆಗಳ ವಿಚಾರವಾಗಿ ಉದಾಸೀನ ಧೋರಣೆಯು ಲಿವ್‌–ಇನ್ ಸಂಬಂಧಗಳಿಗೆ ಬಹುಶಃ ಜನ್ಮನೀಡಿರಬಹುದು’ ಎಂದು ಪೀಠ ವಿವರಿಸಿದೆ.

ಆದರೆ, ಇಂತಹ ಸಂಬಂಧಗಳಲ್ಲಿ ಇರುವ ಮಹಿಳೆಯರನ್ನು ರಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಲಿವ್–ಇನ್ ಸಂಬಂಧಗಳ ಸಂಗಾತಿಯಿಂದ ಹಿಂಸೆಗೆ ಗುರಿಯಾಗುವವರೂ ಅವರೇ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT