ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election Results: ಬಿಜೆಪಿ ನೆಲೆ ವಿಸ್ತರಣೆಗೆ ಕಾಂಗ್ರೆಸ್ ಅಡ್ಡಿ

ಕೇರಳದಲ್ಲಿ ಮೊದಲ ಗೆಲುವು * ಆಡಳಿತದಲ್ಲಿ ಇರುವ ರಾಜ್ಯಗಳಲ್ಲೂ ಎರಡಂಕಿ ದಾಟದ ಕಾಂಗ್ರೆಸ್
Published 4 ಜೂನ್ 2024, 23:39 IST
Last Updated 4 ಜೂನ್ 2024, 23:39 IST
ಅಕ್ಷರ ಗಾತ್ರ

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳ ಮೇಲೆ ಬಿಜೆಪಿ ವಿಶೇಷ ದೃಷ್ಟಿ ನೆಟ್ಟಿತ್ತು. ಹಿಂದಿ ಭಾಷಿಕ ರಾಜ್ಯಗಳ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ ಆ ಅಪವಾದ ಹೋಗಲಾಡಿಸಿಕೊಳ್ಳಲು ಮತ್ತು ತನ್ನ ಬಲ ವೃದ್ಧಿಸಿಕೊಳ್ಳಲು ಈ ಬಾರಿ ಹಲವು ತಂತ್ರಗಳ ಮೊರೆ ಹೋಗಿತ್ತು. ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ‘ಚಾರ್ ಸೌ ಪಾರ್’ ಸಾಧನೆ ಮಾಡಲಿದೆ ಎಂದು ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ ಹೇಳಿದ್ದು ಬಿಜೆಪಿಯ ಈ ಉದ್ದೇಶವನ್ನು ಬಹಿರಂಗಪಡಿಸಿತ್ತು. 

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ದಕ್ಷಿಣದಲ್ಲಿ ವ್ಯಾಪಕವಾಗಿ ರ್‍ಯಾಲಿಗಳನ್ನು ಮಾಡಿದ್ದರು. ಕರ್ನಾಟಕ, ತೆಲಂಗಾಣದಲ್ಲಿ ಪಕ್ಷದ ಬಲ ಹೆಚ್ಚಿಸಿಕೊಳ್ಳುವ ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಖಾತೆ ತೆರೆಯುವ ಮಹದಾಸೆ ಹೊಂದಿತ್ತು.          

ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಕೊಂಚ ಮಟ್ಟಿಗೆ ಮೇಲ್ನೋಟಕ್ಕೆ ಉತ್ತಮ ಸಾಧನೆ ಮಾಡಿದೆ ಎನ್ನುವಂತೆ ಕಂಡುಬಂದರೂ, ವಾಸ್ತವ ಬೇರೆಯೇ ಇದೆ. ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 131 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ‘ಇಂಡಿಯಾ’ ಕೂಟ ಈ ಬಾರಿ 77 ಸ್ಥಾನ ಗಳಿಸಿದ್ದರೆ, ಎನ್‌ಡಿಎ ಕೂಟವು 51 ಕ್ಷೇತ್ರ ಗೆದ್ದುಕೊಂಡಿದೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ 42 ಕ್ಷೇತ್ರಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿದ್ದರೆ, ಬಿಜೆಪಿ 29 ಸ್ಥಾನಗಳನ್ನು ಗಳಿಸಿದೆ. 2019ರಲ್ಲಿ ಬಿಜೆಪಿ 30 ಕ್ಷೇತ್ರಗಳನ್ನು ಗೆದ್ದಿತ್ತು. 

ತೆಲಂಗಾಣ: ಬಿಜೆಪಿ ‘ದುಪ್ಪಟ್ಟು’ ಸಾಧನೆ   

ದಕ್ಷಿಣದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಪೈಕಿ ಬಿಜೆಪಿಗೆ ಕೊಂಚವಾದರೂ ನೆಲೆ ಇದ್ದದ್ದು ತೆಲಂಗಾಣದಲ್ಲಿ ಮಾತ್ರ. ಅಲ್ಲಿ 2019ರಲ್ಲಿ ಬಿಜೆಪಿ 4 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಈ ಬಾರಿ ರಾಜ್ಯದಲ್ಲಿ ತನ್ನ ಬಲವನ್ನು 8ಕ್ಕೆ ಏರಿಸಿಕೊಂಡಿದ್ದರೆ, ಆಡಳಿತಾರೂಢ ಪಕ್ಷವಾಗಿದ್ದರೂ ಕಾಂಗ್ರೆಸ್ ಎರಡಂಕಿ ಮುಟ್ಟುವಲ್ಲಿ ವಿಫಲವಾಗಿದೆ. ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ದಾಖಲಿಸಿದ್ದ ಎ.ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್‌, ಲೋಕಸಭಾ ಚುನಾವಣೆಯಲ್ಲಿ ಕೇವಲ 8 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ. 

ಆಂಧ್ರಪ್ರದೇಶ: ಟಿಡಿಪಿ ಮರೆಯಲ್ಲಿ ಬಿಜೆಪಿ ಗೆಲುವು 

ದಕ್ಷಿಣದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅತಿ ಹೆಚ್ಚು ಲಾಭವಾಗಿರುವುದು ಆಂಧ್ರಪ್ರದೇಶದಲ್ಲಿ. ಚುನಾವಣಾ ಪೂರ್ವದಲ್ಲೇ ಟಿಡಿಪಿ ಹಾಗೂ ಜನಸೇನಾ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಟಿಡಿಪಿ ಬೆಂಬಲದಲ್ಲಿ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿ ಖಾತೆ ತೆರೆದಿದೆ. ಮೂರು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಗೆ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಈ ಬಾರಿ ಆ ಕೊರತೆಯನ್ನು ಆಂಧ್ರಪ್ರದೇಶ ನೀಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ ಅತ್ಯಂತ ಪ್ರಮುಖ ಪಕ್ಷವಾಗಿದ್ದು, ಚಂದ್ರಬಾಬು ನಾಯ್ಡು ‘ಕಿಂಗ್ ಮೇಕರ್’ ಆಗಲಿದ್ದಾರೆ.

ಕೇರಳ: ಖಾತೆ ತೆರೆದ ಬಿಜೆಪಿ 

ಎಡಪಕ್ಷಗಳ ಎಲ್‌ಡಿಎಎಫ್‌ ಆಡಳಿತ ನಡೆಸುತ್ತಿರುವ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಈ ಬಾರಿ ಉತ್ತಮ ಸಾಧನೆ ಮಾಡಿದೆ. ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಯುಡಿಎಫ್‌ 18 ಕ್ಷೇತ್ರಗಳಲ್ಲಿ ಗೆದ್ದಿದೆ. ಬಿಜೆಪಿ ವಿಶೇಷವಾಗಿ ಗುರಿ ನೆಟ್ಟಿದ ರಾಜ್ಯ ಕೇರಳ. ‘ಕೆಂಪು ಕೋಟೆ’ಯಲ್ಲಿ ಬೇರು ಬಿಡಲು ಹರಸಾಹಸ ನಡೆಸಿದ ಬಿಜೆಪಿ ಈ ಬಾರಿ ಕೊನೆಗೂ ಅದರಲ್ಲಿ ಯಶಸ್ವಿಯಾಗಿದೆ. ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆದ್ದಿದ್ದಾರೆ. ಈ ಮೂಲಕ ದಶಕಗಳ ಕಾಲದ ಕೇಸರಿ ಪಾಳಯದ ಕನಸು ನನಸಾಗಿದೆ.  

ತಮಿಳುನಾಡು: ‘ಇಂಡಿಯಾ’ ಕೂಟದ ಅಬ್ಬರ 

ದ್ರಾವಡಿ ಪಕ್ಷಗಳ ತವರು ನೆಲವಾದ ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸಿದೆ. ಕಳೆದ ಬಾರಿ ಡಿಎಂಕೆ 20 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಡಿಎಂಕೆ ಈ ಬಾರಿ 22 ಗೆದ್ದು ಸ್ಥಾನಗಳಲ್ಲಿ ಯಶಸ್ಸು ಕಂಡಿದೆ. ಉಳಿದ 17 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಗೆದ್ದಿವೆ. ಈ ಮೂಲಕ ತಮಿಳುನಾಡು ‘ಇಂಡಿಯಾ’ ಕೂಟಕ್ಕೆ ಹೆಚ್ಚು ಬಲ ತುಂಬಿದ ರಾಜ್ಯಗಳಲ್ಲೊಂದಾಗಿದೆ. ಭಾರಿ ಅಬ್ಬರ ಮಾಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶೇ 10ಕ್ಕಿಂತ ಹೆಚ್ಚು ಮತ ಪ್ರಮಾಣವನ್ನು ಗಳಿಸಿರುವುದೇ ಬಿಜೆಪಿ ಸಾಧನೆ. 

ತೆಲಂಗಾಣ: ನೆಲಕಚ್ಚಿದ ಬಿಆರ್‌ಎಸ್‌

ಈ ಬಾರಿಯ ಚುನಾವಣೆಯಲ್ಲಿ ಶೋಚನೀಯ ಸಾಧನೆ ಎಂದರೆ ಅದು ಬಿಆರ್‌ಎಸ್ ಪಕ್ಷದ್ದು. 2019ರ ಲೋಕಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ ರಾವ್ ಅವರ ಬಿಆರ್‌ಎಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. 17 ಕ್ಷೇತ್ರಗಳ ಪೈಕಿ ಬಿಆರ್‌ಎಸ್‌ 9 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿ ಬಿಆರ್‌ಎಸ್‌ ಸಂಪೂರ್ಣವಾಗಿ ನೆಲ ಕಚ್ಚಿದ್ದು ಕನಿಷ್ಠ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಕಳೆದ ನವೆಂಬರ್‌ವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಆರ್‌ಎಸ್ ವಿಧಾನಸಭಾ ಚುನಾವಣೆಯಲ್ಲಿ ಸೋತು ವಿರೋಧ ಪಕ್ಷವಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪೈಪೋಟಿ ನಡುವೆ ನೆಲೆ ಕಳೆದುಕೊಂಡಿರುವ ಬಿಆರ್‌ಎಸ್‌ ಶೂನ್ಯಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT