ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತು ಪರಿಸ್ಥಿತಿ ಕುರಿತು ಲೋಕಸಭಾ ಸ್ಪೀಕರ್ ಮಾತು: ರಾಹುಲ್ ಗಾಂಧಿ ಆಕ್ಷೇಪ

Published 27 ಜೂನ್ 2024, 10:43 IST
Last Updated 27 ಜೂನ್ 2024, 10:43 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಸ್ಪೀಕರ್‌ ಆಗಿ ಚುನಾಯಿತರಾದ ಬಳಿಕ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಬುಧವಾರ ನೀಡಿದ್ದ ಹೇಳಿಕೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ತುರ್ತುಪರಿಸ್ಥಿತಿಯು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಆಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಬಾಬಾ ಸಾಹೇಬರು ಬರೆದ ಸಂವಿಧಾನದ ಮೇಲೆ ದಾಳಿ ನಡೆಸಿದ್ದರು’ ಎಂದು ಸ್ಪೀಕರ್‌ ಹೇಳಿದ್ದರು. 

‘ಭಾರತದ ಮೇಲೆ ಸರ್ವಾಧಿಕಾರತ್ವವನ್ನು ಹೇರಲಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರೆತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ನಾಗರಿಕರ ಹಕ್ಕುಗಳನ್ನು ನಾಶಪಡಿಸಲಾಯಿತು. ವಿರೋಧ ಪಕ್ಷಗಳ ಅನೇಕ ನಾಯಕರನ್ನು ಜೈಲಿಗಟ್ಟಲಾಯಿತು’ ಎಂದು ಅವರು ತಿಳಿಸಿದ್ದರು. ಈ ಮಾತುಗಳನ್ನು ವಿರೋಧಿಸಿ ಕಾಂಗ್ರೆಸ್‌ ಸಂಸದರು ಪ್ರತಿಭಟಿಸಿದ್ದರು.

ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ರಾಹುಲ್‌, ಸ್ಪೀಕರ್‌ ಅವರನ್ನು ಭೇಟಿಯಾಗಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ನಾಯಕ ಅಥವಾ ಪ್ರಧಾನಿ ಅವರು ಈ ಕುರಿತು ಉಲ್ಲೇಖ ಮಾಡಿದ್ದರೆ ಪರವಾಗಿರಲಿಲ್ಲ. ಆದರೆ ಸ್ಪೀಕರ್‌ ನಿಷ್ಪಕ್ಷಪಾತವಾಗಿ ಇರಬೇಕು ಎಂದು ರಾಹುಲ್‌ ಹೇಳಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

ಜಂಟಿ ಸದನಗಳ ಸದಸ್ಯರನ್ನು ಉದ್ದೇಶಿಸಿ ಗುರುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ತುರ್ತು ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿ, ‘ಅದು ಸಂವಿಧಾನದ ಮೇಲಿನ ನೇರ ದಾಳಿಯಾಗಿದ್ದು, ಕರಾಳ ಅಧ್ಯಾಯವಾಗಿದೆ. ಅದರಿಂದ ಇಡೀ ದೇಶವೇ ಆಕ್ರೋಶಗೊಂಡಿತ್ತು’ ಎಂದು ಹೇಳಿದರು. ಈ ವೇಳೆ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಉಪಸ್ಥಿತರಿದ್ದರು. 

ಸಮಾಜವಾಧಿ ಪಕ್ಷದ ನಾಯಕ ಧರ್ಮೇಂದ್ರ ಯಾದವ್‌, ಡಿಎಂಕೆಯ ಕನಿಮೋಳಿ, ಶರದ್ ಪವಾರ್‌ ಬಣದ ಎನ್‌ಸಿಪಿಯ ಸುಪ್ರಿಯಾ ಸುಳೆ, ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ ಅವರು ರಾಹುಲ್‌ ಗಾಂಧಿ ಅವರೊಂದಿಗೆ ಸಭಾಧ್ಯಕ್ಷರನ್ನು ಭೇಟಿಯಾದರು.

ಲೋಕಸಭೆ ಸ್ಪೀಕರ್‌ ಆಗಿ ಸತತ ಎರಡನೇ ಅವಧಿಗೆ ಬುಧವಾರ ಆಯ್ಕೆಯಾದ ನಂತರ ಬಿರ್ಲಾ ಅವರು, ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಸದನದಲ್ಲಿ ಓದಿದರು. ಈ ವೇಳೆ ಕಾಂಗ್ರೆಸ್ ಸಂಸದರು ಸದನದಲ್ಲೇ ಪ್ರತಿಭಟಿಸಿದರು.

ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 1975ರ ಜೂನ್‌ 26ರಂದು ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT