ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಅಧಿವೇಶನ: ಮೊದಲ ದಿನ ಮೋದಿ–‘ಇಂಡಿಯಾ’ ಜಗಳ್‌ಬಂದಿ!

Published 25 ಜೂನ್ 2024, 1:20 IST
Last Updated 25 ಜೂನ್ 2024, 1:20 IST
ಅಕ್ಷರ ಗಾತ್ರ

ನವದೆಹಲಿ: 18ನೇ ಲೋಕಸಭೆಯ ಮೊದಲನೇ ಅಧಿವೇಶನ ಸೋಮವಾರ ಆರಂಭವಾಯಿತು. ’ಕಳೆದ ಎರಡು ಅವಧಿಯಲ್ಲಿ ದುರ್ಬಲ ವಿರೋಧ ಪಕ್ಷಗಳು ಇದ್ದವು’ ಎಂದು ಹಂಗಿಸಿದ ಪ್ರಧಾನಿ ನರೇಂದ್ರ ಮೋದಿ, ‘ಸದನದಲ್ಲಿ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರಬಲ ವಿಪಕ್ಷಗಳು ಬೇಕೇ ಹೊರತು, ಘೋಷಣೆಗಳನ್ನು ಕೂಗುವವರಲ್ಲ’ ಎಂದು ಛೇಡಿಸಿದರು. ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ‘ಸಂವಿಧಾನ ಉಳಿಸಿ’ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಈ ಹೋರಾಟವನ್ನು ಸದನಕ್ಕೂ ಕೊಂಡೊಯ್ದರು. 

ಉತ್ತಮ ವಿಪಕ್ಷ ಅಗತ್ಯ: ಮೋದಿ

‘ಇದುವರೆಗಿನ ನಿರಾಸೆಯ ಹೊರತಾಗಿಯೂ, 18ನೇ ಲೋಕಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿವೆ ಹಾಗೂ ನಮ್ಮ ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿಯಲಿವೆ ಎಂಬ ವಿಶ್ವಾಸವಿದೆ’ ಎಂದು ನರೇಂದ್ರ ಮೋದಿ ಹೇಳಿದರು. 

ಅಧಿವೇಶನಕ್ಕೆ ಮುನ್ನ ಮಾತನಾಡಿದ ಅವರು, ‘ಸದನದಲ್ಲಿ ಚರ್ಚೆ ಮತ್ತು ಕಾರ್ಯಶ್ರದ್ಧೆಯನ್ನು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆಯೇ ಹೊರತು ಘೋಷಣೆ, ನಾಟಕೀಯತೆ ಮತ್ತು ಅಶಾಂತಿಯನ್ನಲ್ಲ. ದೇಶಕ್ಕೆ ಉತ್ತಮ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ’ ಎಂದರು. 

ಸರ್ಕಾರ ನಡೆಸಲು ಬಹುಮತದ ಅಗತ್ಯವಿದೆ ಎಂದು ನಾವು ನಂಬುತ್ತೇವೆ. ಆದರೆ, ದೇಶ ಮುನ್ನಡೆಸಲು ಸಹಮತ ಬಹಳ ಅವಶ್ಯಕ. ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತೇವೆ ಮತ್ತು ಮೂರು ಪಟ್ಟು ಹೆಚ್ಚು ಫಲಿತಾಂಶ ಕೊಡಲಿದ್ದೇವೆ ಎಂದು ಅವರು ಹೇಳಿದರು. 

ದೇಶದ ಜನರು ನಮ್ಮ ಸರ್ಕಾರದ ಉದ್ದೇಶಗಳು ಹಾಗೂ ನೀತಿಗಳನ್ನು ಒಪ್ಪಿಕೊಂಡು ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಕೊಟ್ಟಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು 140 ಕೋಟಿ ದೇಶವಾಸಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಮ್ಮ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದು ಅಭಯ ನೀಡಿದರು. 

ಮೋದಿ–ಶಾಗೆ ಸಂವಿಧಾನ ಪ್ರದರ್ಶನ 

ವಿಪಕ್ಷ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಲೋಕಸಭೆಗೆ ಪಾದಯಾತ್ರೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಅಮಿತ್‌ ಶಾ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಇತರ ನಾಯಕರು ಸಂವಿಧಾನದ ಪ್ರತಿ ಪ್ರದರ್ಶಿಸಿದರು.

ಒಂದೆಡೆ, ಅಸ್ಸಾಂ ಹಾಗೂ ಕೇರಳದ ಕಾಂಗ್ರೆಸ್‌ನ ಕೆಲವು ಸಂಸದರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದರು. ಇನ್ನೊಂದೆಡೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಮಾಣವಚನ ಸ್ವೀಕರಿಸುವಾಗ ವಿಪಕ್ಷ ಸದಸ್ಯರು ‘ನೀಟ್‌ ನೀಟ್‌’ ಎಂದು ಘೋಷಣೆ ಕೂಗಿದರು. 

ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಿದ ಸ್ಥಳದಿಂದ ಲೋಕಸಭೆಯವರೆಗೆ ವಿಪಕ್ಷಗಳ ಸದಸ್ಯರು ಪಾದಯಾತ್ರೆ ನಡೆಸಿದರು. ಕೆಲವು ಸಂಸದರು ಹಿಂದಿ ಹಾಗೂ ಬಂಗಾಳಿಯ ಸಂವಿಧಾನದ ಪ್ರತಿಯನ್ನು ಹಿಡಿದಿದ್ದರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಸಂಸದೀಯ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಸಮಾಜವಾದಿ ಪಕ್ಷದ ಸಂಸದರೊಂದಿಗೆ ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತ್ಯೇಕವಾಗಿ ಲೋಕಸಭೆಯತ್ತ ಸಾಗಿದರು. 

ನಂತರ ಸೋನಿಯಾ ಗಾಂಧಿ ಅವರು ‘ಸಂವಿಧಾನ ಇಂದು ಮಾತನಾಡಲಿದೆ’ ಎಂದು ಹೇಳಿದರು. ಲೋಕಸಭೆಯೊಳಗೆ ಪ್ರಧಾನಿ ಪ್ರಮಾಣವಚನ ಸ್ವೀಕರಿಸಿದಾಗ ರಾಹುಲ್‌ ಅವರು ಸಂವಿಧಾನ ಪ್ರತಿ ಪ್ರದರ್ಶಿಸಿದರು. ಇತರ ಸಂಸದರು ಕೈಜೋಡಿಸಿದರು. ಶಾ ಅವರು ಪ್ರಮಾಣವಚನ ಸ್ವೀಕರಿಸಿದಾಗ ವಿಪಕ್ಷ ಸದಸ್ಯರು ಅದನ್ನು ಪುನರಾವರ್ತಿಸಿದರು. 

ಲೋಕಸಭೆಯಲ್ಲಿ ಎಂದೂ ಮೊದಲ ಸಾಲಿನಲ್ಲಿ ಕುಳಿತುಕೊಳ್ಳದ ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಫೈಜಾಬಾದ್‌ ಸಂಸದ ಅವಧೇಶ್‌ ‍ಪ್ರಸಾದ್‌, ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ಮುಂದಿನ ಸಾಲಿನಲ್ಲಿ ಕುಳಿತರು. 

ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್‌ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರತಿಭಟಿಸಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಕೋಡಿಕುನ್ನಿಲ್‌ ಸುರೇಶ್, ಡಿಎಂಕೆಯ ಟಿ.ಆರ್.ಬಾಲು ಹಾಗೂ ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಸದನದಿಂದ ಹೊರ ನಡೆದರು. ಇದರ ನಡುವೆಯೇ, ಸಭಾಧ್ಯಕ್ಷರ ಪ್ಯಾನೆಲ್‌ನಲ್ಲಿರುವ ಬಿಜೆಪಿಯ ರಾಧಾಮೋಹನ್ ಸಿಂಗ್‌ ಹಾಗೂ ಫಗ್ಗನ್ ಸಿಂಗ್ ಕುಲಸ್ತೆ ಅವರು ಪ್ರಮಾಣವಚನ ಸ್ವೀಕರಿಸಿದರು. ಆಗ ವಿಪಕ್ಷ ಸದಸ್ಯರು ‘ಸಂವಿಧಾನದ ಉಲ್ಲಂಘನೆ’ ಎಂದು ಘೋಷಣೆ ಕೂಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT