ಶ್ರೀನಗರ : ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಕೊಲೆ ಮಾಡಿ, ತುಂಡುಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.
ಮಾರ್ಚ್ 8 ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ‘30 ವರ್ಷದ ತನ್ನ ಸಹೋದರಿ ಮಾರ್ಚ್ 7 ರಂದು ಕೋಚಿಂಗ್ ತರಗತಿಗೆ ತೆರಳಿದ್ದಳು. ಆದರೆ, ಮನೆಗೆ ಮರಳಲಿಲ್ಲ’ ಎಂದು ಯುವತಿಯ ಸಹೋದರ ತನ್ವೀರ್ ಅಹ್ಮದ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು.
‘ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದರು. ಆರೋಪಿ ಶಬೀರ್ ಅಹ್ಮದ್ ವಾನಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯುವತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅಪರಾಧ ಮರೆ ಮಾಚಲು, ಕೊಲೆ ಬಳಿಕ ಶವವನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತು ಹಾಕಿದ್ದ. ವಿವಿಧ ಸ್ಥಳಗಳಿಂದ ದೇಹದ ಎಲ್ಲಾ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆಯ ನಿಜವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ, ಕೆಲ ದಿನಗಳ ಹಿಂದೆ ಯುವತಿಯನ್ನು ಮದುವೆಯಾಗುವ ಸಲುವಾಗಿ ಆಕೆಯ ಕುಟುಂಬವನ್ನು ಆರೋಪಿ ಸಂಪರ್ಕಿಸಿದ್ದ. ಆದರೆ, ಆಕೆ ಪ್ರಸ್ತಾಪ ತಿರಸ್ಕರಿಸಿದ್ದಳು ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಟೈಲ್ಸ್ ಸಂಬಂಧಿತ ಕೆಲಸಗಳಿಗಾಗಿ ವಾನಿ ತಮ್ಮ ಮನೆಗೆ ಭೇಟಿ ನೀಡುತ್ತಿದ್ದ ಎಂದು ಯುವತಿ ಕುಟುಂಬ ಹೇಳಿಕೊಂಡಿದೆ.