ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆಮನೆ ಲಾಕ್‌ಡೌನ್‌ ಸನ್ನಿಹಿತ: ವಿಪಕ್ಷ ಕಳವಳ

ಬೆಲೆ ಏರಿಕೆ: ಲೋಕಸಭೆ ಚರ್ಚೆಯಲ್ಲಿ ವಿಪಕ್ಷ ಕಳವಳ
Last Updated 1 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳೇ ಬೆಲೆ ಏರಿಕೆಗೆ ಕಾರಣ. ಸರ್ಕಾರವು ಸಾಮಾನ್ಯ ಜನ
ರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಇದ್ದರೆ ಹೆಚ್ಚಿನವರ ಮನೆಯ ಅಡುಗೆಕೋಣೆಗಳು ‘ಲಾಕ್‌ಡೌನ್‌’ ಘೋಷಿಸಬೇಕಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ. ಬೆಲೆ ಏರಿಕೆ ಕುರಿತು ಲೋಕಸಭೆಯಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿ ವಿರೋಧ ಪಕ್ಷಗಳ ಸದಸ್ಯರು ಮಾತನಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಚರ್ಚೆಗೆ ಪ್ರತಿಕ್ರಿಯೆ ನೀಡಿ, ‘ಭಾರತದ ಅರ್ಥ ವ್ಯವಸ್ಥೆಯ ನೆಲೆಗಟ್ಟು ಗಟ್ಟಿಯಾಗಿದೆ. ಹಾಗಾಗಿ, ಆರ್ಥಿಕ ಪ್ರಗತಿ ಸ್ಥಗಿತ ಅಥವಾ ಆರ್ಥಿಕ ಹಿಂಜರಿಕೆಯ ಅಪಾಯ ಇಲ್ಲ’ ಎಂದು ಪ್ರತಿಪಾದಿಸಿದರು. ನಿರ್ಮಲಾ ಅವರ ಪ್ರತಿಕ್ರಿಯೆಯು ತೃಪ್ತಿಕರಾಗಿಲ್ಲ ಎಂದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ಸರ್ಕಾರದ ನಿರ್ಧಾರಗಳಿಂದಾಗಿ ದೇಶದ 25 ಕೋಟಿ ಮನೆಗಳು ಸಂಕಷ್ಟಕ್ಕೆ ಒಳಗಾಗಿವೆ. ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಾಗಿದೆ ಎಂದು ಬೆಲೆ ಏರಿಕೆ ಕುರಿತ ಚರ್ಚೆಯನ್ನು ಆರಂಭಿಸಿ ಕಾಂಗ್ರೆಸ್‌ನ ಮನೀಶ್‌ ತಿವಾರಿ ಅವರು ಹೇಳಿದರು.

ಉಳಿತಾಯ, ಹೂಡಿಕೆ, ಉತ್ಪಾದನೆ, ಬಳಕೆ ಮತ್ತು ಉದ್ಯೋಗ ಅರ್ಥ ವ್ಯವಸ್ಥೆಯ ಐದು ಸ್ತಂಭಗಳು. ಆದರೆ ಸರ್ಕಾರದ ತಪ್ಪು ನೀತಿಗಳು ಈ ಎಲ್ಲವನ್ನೂ ಶಿಥಿಲಗೊಳಿಸಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ 27 ಕೋಟಿ ಜನರನ್ನು ಬಡತನ ರೇಖೆಯಿಂದಮೇಲೆತ್ತಲಾಗಿತ್ತು. 2021ರಲ್ಲಿ ಪ್ರಕಟವಾದ ವರದಿಯ ಪ್ರಕಾರ, 23 ಕೋಟಿ ಜನರು ಬಡತನ ರೇಖೆಯಿಂದ ಕೆಳಗೆ ಜಾರಿದ್ದಾರೆ ಎಂದು ಅವರು ಹೇಳಿದರು.

ದೇಶದ ಈಗಿನ ಆರ್ಥಿಕ ಸ್ಥಿತಿಗೆ ಕೋವಿಡ್‌–19 ಸಾಂಕ್ರಾಮಿಕವು ಕಾರಣವಾಗಿರಬಹುದು. ಆದರೆ, ಸಾಂಕ್ರಾಮಿಕ
ವು ಕಾಣಿಸಿಕೊಳ್ಳುವ ಹೊತ್ತಿಗಾಗಲೇ, ನೋಟು ರದ್ದತಿಯ ಕಾರಣದಿಂದಾಗಿ ದೇಶದ ಆರ್ಥಿಕತೆಯು ದುರ್ಬಲವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಎಂದು ಟಿಎಂಸಿಯ ಕಾಕೋಲಿ ಘೋಷ್‌ ದಸ್ತಿದಾರ್‌ ಒತ್ತಾಯಿಸಿದರು.

ಸದನದಲ್ಲಿ ಹಸಿ ಬದನೆಕಾಯಿ ಕಚ್ಚಿದ ಸಂಸದೆ

ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತೀದಾರ್ ಅವರು ಬೆಲೆ ಏರಿಕೆಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ ಹಸಿ ಬದನೆಕಾಯಿಯನ್ನು ಕಚ್ಚಿ ಗಮನ ಸೆಳೆದರು. ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಅಡುಗೆದುಬಾರಿಯಾಗುತ್ತಿದೆ ಎಂಬುದನ್ನು ಅವರು ಹಸಿ ಬದನೆಕಾಯಿ ತಿನ್ನುವ ಮೂಲಕ ಹೇಳಿದರು.

‘ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಸಿಲಿಂಡರ್ ದರವು ₹600ರಿಂದ ₹1,100ಕ್ಕೆ ಹೆಚ್ಚಳವಾಗಿದೆ.ನಾವು ಹಸಿ ತರಕಾರಿಗಳನ್ನು ತಿನ್ನಬೇಕು ಎಂದು ಸರ್ಕಾರ ಬಯಸುತ್ತಿದೆಯೇ? ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರವಾಗಿದ್ದು, ತಕ್ಷಣವೇ ದರ ಇಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT