ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾಕ್ಕೆ ಮನವಿ

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾಗೆ ಮನವಿ
Last Updated 31 ಜುಲೈ 2018, 17:37 IST
ಅಕ್ಷರ ಗಾತ್ರ

ನವದೆಹಲಿ: ‘ಸಾಲ ಬಾಧೆಯಿಂದಾಗಿ ಆತ್ಮಹತ್ಯೆಯ ಹಾದಿ ತುಳಿದಿರುವ ರೈತರಿಗೆ ನೆರವಾಗಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಮಾಡಬೇಕು’ ಎಂದು ತುಮಕೂರು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಕೇಂದ್ರ ಸರ್ಕಾರವನ್ನು ಕೋರಿದರು.

ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ರೈತರ ಸ್ಥಿತಿಗತಿ ಕುರಿತ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಾಲದಿಂದಾಗಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಇತ್ತೀಚೆಗಷ್ಟೇ ರೈತರ ₹49,000 ಕೋಟಿ ಸಾಲ ಮನ್ನಾ ಮಾಡಿದೆ. ಸಿದ್ದರಾಮಯ್ಯ ಅವರೂ ಸಹಕಾರಿ ಕ್ಷೇತ್ರದ ₹ 8,000 ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದರು. ಕೇಂದ್ರವೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದೆಯೇ ಎಂದು ಅವರು ಪ್ರಶ್ನಿಸಿದರು.

ಸಾಲ ಮನ್ನಾ ಕುರಿತ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ರಾಧಾಮೋಹನ ಸಿಂಗ್‌, ‘ರೈತರನ್ನು ಸಶಕ್ತಗೊಳಿಸಲೆಂದೇ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಕೃಷಿ ಕ್ಷೇತ್ರದ ಅಭ್ಯುದಯಕ್ಕಾಗಿ ₹ 40,000 ಕೋಟಿ ಮೂಲ ನಿಧಿ ಒದಗಿಸಲಾಗಿದೆ’ ಎಂದರು.

ವಿಮೆ ಯೋಜನೆ ನಿರಾಸಕ್ತಿ:ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲೇ ಒಟ್ಟು 4,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಜಾರಿಗೊಳಿಸಿರುವ ಬೆಳೆ ವಿಮೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ವಿಫಲವಾಗಿದ್ದು, ರೈತರಿಗೆ ಯೋಜನೆಯ ಲಾಭ ದೊರೆತಿಲ್ಲ ಎಂದು ಧಾರವಾಡ ಸಂಸದ ಪ್ರಹ್ಲಾದ ಜೋಶಿ ದೂರಿದರು.

ಬೆಳೆ ವಿಮೆ ಪರಿಹಾರವನ್ನು ರಾಜ್ಯ ಸರ್ಕಾರ ರೈತರಿಗೆ ತಲುಪಿಸಲು ವಿಫಲವಾಗಿದೆ. ಬೆಂಬಲಬೆಲೆ ಯೋಜನೆ ಅಡಿ ಕಳೆದ ವರ್ಷ ರೈತರಿಂದ ಕಡಲೆ ಖರೀದಿಸಿರುವ ಸರ್ಕಾರ ಇದುವರೆಗೆ ಹಣ ಪಾವತಿಸಿಲ್ಲ ಎಂದರು.

ಕಳೆದ ವರ್ಷ ರೈತರಿಂದ ₹ 6,000 ಕೋಟಿ ಪ್ರೀಮಿಯಂ ಹಣ ಸ್ವೀಕರಿಸಲಾಗಿದ್ದು, ಒಟ್ಟು ₹ 26,000 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ಕೇಂದ್ರ ಕೃಷಿ ರಾಜ್ಯಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಹೇಳಿದರು.

ರೈತರಿಗೆ ಮಾಸಾಶನ
ಒಂದೂವರೆ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರ ಮಾಸಾಶನ ಯೋಜನೆ ಆರಂಭಿಸಿ ನೆರವಿಗೆ ಬರಬೇಕು ಎಂದು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌ ಸಲಹೆ ನೀಡಿದರು.

‘ಸಂಕಷ್ಟದಲ್ಲಿರುವ ರೈತರ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT