ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರು ಕ್ರಾಂತಿ’ಯ ಹರಿಕಾರ ಸ್ವಾಮಿನಾಥನ್‌ಗೆ ಒಲಿದ ‘ಭಾರತ ರತ್ನ’

Published 9 ಫೆಬ್ರುವರಿ 2024, 15:32 IST
Last Updated 9 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಚೆನ್ನೈ: ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ‘ಎಂಎಸ್‌’ ಎಂದೇ ಕರೆಯುತ್ತಿದ್ದ ಎಂ.ಎಸ್‌.ಸ್ವಾಮಿನಾಥನ್‌ ಅವರ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ನಡೆದ ‘ಹಸಿರು ಕ್ರಾಂತಿ’, ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ನೆರವಾಯಿತು. ಗೋಧಿ ಉತ್ಪಾದನೆಯಲ್ಲಿ ದೇಶವು ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿದಲ್ಲದೆ, ಅಮೆರಿಕದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಿತು.

ಮರಣೋತ್ತರವಾಗಿ ‘ಭಾರತ ರತ್ನ’ ಗೌರವಕ್ಕೆ ಪಾತ್ರರಾಗಿರುವ ಅವರು ಸುಸ್ಥಿರ ಕೃಷಿಯ ಪ್ರತಿಪಾದಕರಾಗಿದ್ದರು. ಸ್ವಾಮಿನಾಥನ್ ಅವರು ಜಾಗತಿಕ ಆಹಾರ ವ್ಯವಸ್ಥೆಗಳ ಸುಸ್ಥಿರತೆಯ ಜೊತೆಗೆ ಎಲ್ಲರಿಗೂ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ‘ಹಸಿರು ಕ್ರಾಂತಿ'ಯ ಪ‍ರವಾಗಿ ನಿಂತರು.

ರೈತರು ಹಳೆಯ ಕಾಲದ ಕೃಷಿ ತಂತ್ರಗಳನ್ನು ಅವಲಂಬಿಸಿದ್ದ ಕಾಲದಲ್ಲಿ ಅವರು ಹೊಸ ತಂತ್ರಜ್ಞಾನವನ್ನು ಪರಿಚಯಿಸಿ ದೇಶದ ಕೃಷಿ ಕ್ಷೇತ್ರದ ಪಥ ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ತಮಿಳುನಾಡಿನ ಕುಂಬಕೋಣಂನಲ್ಲಿ ಡಾ.ಎಂ.ಕೆ.ಸಾಂಬಶಿವನ್‌– ಪಾರ್ವತಿ ತಂಗಮ್ಮ ದಂಪತಿಗೆ 1925ರ ಆಗಸ್ಟ್‌ 7 ರಂದು ಜನಿಸಿದ ಅವರು 2023ರ ಸೆಪ್ಟೆಂಬರ್‌ 28 ರಂದು ತಮ್ಮ 98ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಮತ್ತು ರೈತರ ಆದಾಯ ಹೆಚ್ಚಿಸುವುದಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟರು.

ನೆದರ್ಲೆಂಡ್ಸ್‌ನ ವಾಹೆನಿಂಗನ್ ಕೃಷಿ ವಿಶ್ವವಿದ್ಯಾಲಯದಲ್ಲಿ 1949 ರಲ್ಲಿ ಕೃಷಿ ಸಂಶೋಧನೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮುಂದುವರಿಸಿದರು. 1952 ರಲ್ಲಿ ಕೇಂಬ್ರಿಜ್‌ ವಿ.ವಿ ಡಾಕ್ಟರೇಟ್ ನೀಡಿತು.

1966ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸ್ವಾಮಿನಾಥನ್ ಅವರಿಗೆ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಕ್ತ ಸ್ವಾತಂತ್ರ್ಯ ನೀಡಲಾಗಿತ್ತು. ಗೋಧಿಯ ಮಿಶ್ರ ತಳಿಗಳ ಅಭಿವೃದ್ಧಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ಈ ತಳಿಗಳ ಕಾರಣದಿಂದಾಗಿ 15 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಗೋಧಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾಯಿತು.

ಹೆಚ್ಚು ಇಳುವರಿ ನೀಡುವ ಭತ್ತ, ಗೋಧಿಯ ತಳಿಗಳನ್ನು ಬೆಳೆಯುವುದಕ್ಕೆ ರೈತರಿಗೆ ತರಬೇತಿ ನೀಡುವಲ್ಲಿ ಕೂಡ ಕೆಲಸ ಮಾಡಿದರು. ಇದರಿಂದಾಗಿ ಆಹಾರದ ಕೊರತೆ ಎದುರಿಸುತ್ತಿದ್ದ ದೇಶವು ಆಹಾರ ರಫ್ತುದಾರ ಆಗಿ ಪರಿವರ್ತನೆ ಕಂಡಿತು.

1979ರಿಂದ 1980ರ ನಡುವೆ ಕೇಂದ್ರ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು 1988 ರಲ್ಲಿ ಎಂ.ಎಸ್‌.ಸ್ವಾಮಿನಾಥನ್‌ ರಿಸರ್ಚ್‌ ಫೌಂಡೇಷನ್ (ಎಂಎಸ್‌ಎಸ್‌ಆರ್‌ಎಫ್‌) ಸ್ಥಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT