ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಚಾಂಪಿಯನ್‌ ‘ಚೌಧರಿ ಚರಣ್‌ ಸಿಂಗ್‌’ಗೆ ಒಲಿದ ‘ಭಾರತ ರತ್ನ’

Published 9 ಫೆಬ್ರುವರಿ 2024, 14:39 IST
Last Updated 9 ಫೆಬ್ರುವರಿ 2024, 14:39 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಸಮಾಜವಾದಿ ಆರ್ಥಿಕತೆಯನ್ನು ವಿರೋಧಿಸಿದ್ದ ಚೌಧರಿ ಚರಣ್‌ ಸಿಂಗ್‌ ಅವರು, ರೈತರ ಮಾಲೀಕತ್ವದ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ರೈತರ ಅಭ್ಯುದಯಕ್ಕಾಗಿಯೇ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು.

ಅಲ್ಪಾವಧಿ ಪ್ರಧಾನಿ ಆಗಿದ್ದರೂ, ಕೃಷಿಕರ ಜೀವನ ಮಟ್ಟ ಸುಧಾರಣೆಗಾಗಿ ಶ್ರಮಿಸಿದ್ದರಿಂದ ಅವರನ್ನು ‘ಭಾರತದ ರೈತರ ಚಾಂಪಿಯನ್‌’ ಎಂದೇ ಕರೆಯಲಾಗುತ್ತದೆ. ಅವರ ಗೌರವಾರ್ಥ ಪ್ರತಿ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್‌ 23 ಅನ್ನು ‘ರಾಷ್ಟ್ರೀಯ ರೈತ ದಿನ’ವನ್ನಾಗಿ ಆಚರಿಸಲಾಗುತ್ತದೆ. 

ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, 1960ರ ದಶಕದಲ್ಲಿ ಕಾಂಗ್ರೆಸ್‌ ತೊರೆದರು. ಉತ್ತರ ಪ್ರದೇಶದಲ್ಲಿಯೇ ಅಲ್ಲದೆ ಇಡೀ ಉತ್ತರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ದೇಶದ ಆರನೇ ಪ್ರಧಾನಿ: ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಅವರು ದೇಶದ ಆರನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮೊರಾರ್ಜಿ ದೇಸಾಯಿ ಅವರ ಬಳಿಕ ಕಾಂಗ್ರೆಸ್ಸೇತರ ಸರ್ಕಾರದ ಎರಡನೇ ಪ್ರಧಾನಿಯಾಗಿ ಸಿಂಗ್‌ ಆಡಳಿತ ನಡೆಸಿದರು. ಅಲ್ಲದೆ ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯ ನೂರ್ಪುರ್ ಗ್ರಾಮದಲ್ಲಿ ರೈತ ಕುಟುಂಬದ ನೇತ್ರಾ ಕೌರ್‌ ಮತ್ತು ಚೌಧರಿ ಮೀರ್‌ ಸಿಂಗ್‌ ದಂಪತಿಗೆ 1902ರ ಡಿಸೆಂಬರ್‌ 23ರಂದು ‌ಚರಣ್‌ ಸಿಂಗ್‌ ಜನಿಸಿದರು. ಅವರ ಗ್ರಾಮವಾದ ಜಾನಿ ಖರ್ದ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಮೀರತ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್‌ ಶಿಕ್ಷಣ ಪೂರೈಸಿದರು. 1923ರಲ್ಲಿ ಆಗ್ರಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ, ನಂತರ ಆಗ್ರಾ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1927ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಗಾಜಿಯಾಬಾದ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. 

ಸ್ವಾತಂತ್ರ್ಯ ಚಳವಳಿ: ಆರ್ಯ ಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದ ಅವರು, ಮಹಾತ್ಮ ಗಾಂಧಿ ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಹಲವು ಬಾರಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲೂ ಜೈಲುವಾಸ ಅನುಭವಿಸಿದ್ದರು.

ಸ್ವಾತಂತ್ರ್ಯ ಚಳವಳಿಯ ಜತೆಗೆ ಅವರು ಪ್ರಾಂತೀಯ ಚುನಾವಣೆಗಳಲ್ಲೂ ಸಕ್ರಿಯರಾಗಿದ್ದರು. 1937ರಲ್ಲಿ ಮೀರತ್‌ ಜಿಲ್ಲೆಯ ಚಪ್ರೌಲಿಯಿಂದ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದರು. ನಂತರ ಅವರು 1946, 1952, 1962 ಮತ್ತು 1967ರಲ್ಲೂ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

1946ರಲ್ಲಿ ಪಂಡಿತ್‌ ಗೋವಿಂದ್‌ ವಲ್ಲಬ್‌ ಪಂತ್‌ ಅವರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ನಂತರ ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ ಮತ್ತು ಮಾಹಿತಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದರು. 1951ರಲ್ಲಿ ನ್ಯಾಯ ಮತ್ತು ಮಾಹಿತಿ ಖಾತೆಗಳೊಂದಿಗೆ ಅವರು ಮೊದಲ ಬಾರಿಗೆ ಸಂಪುಟ ಸಚಿವರಾದರು. ವರ್ಷದ ಬಳಿಕ ಕಂದಾಯ ಮತ್ತು ಕೃಷಿ ಖಾತೆಗಳನ್ನು ಪಡೆದರು. ನಂತರ ಗೃಹ, ಅರಣ್ಯ ಖಾತೆಯ ಸಚಿವರೂ ಆಗಿದ್ದರು.

ಮಹತ್ವದ ತಿರುವು: 1967ರ ಏಪ್ರಿಲ್‌ 1ರಂದು ಅವರು ಕಾಂಗ್ರೆಸ್‌ ಪಕ್ಷ ತೊರೆದರು. ಇದು ಅವರ ರಾಜಕೀಯ ಜೀವನದಲ್ಲಿ ಮಹತ್ವದ ತಿರುವಿಗೆ ಕಾರಣವಾಯಿತು. ಎರಡು ದಿನಗಳ ನಂತರ ಅವರು ಸಂಯುಕ್ತ ವಿಧಾಯಕ್ ದಳದ ನಾಯಕರಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಈ ಮೂಲಕ ಅವರು ಇಡೀ ಉತ್ತರ ಭಾರತದಲ್ಲಿಯೇ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿದರು.

1970ರ ಫೆಬ್ರುವರಿಯಲ್ಲಿ ಕಾಂಗ್ರೆಸ್‌ ವಿಭಜನೆಯ ಬಳಿಕ ಅವರು ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಆದರೆ 1970ರ ಅಕ್ಟೋಬರ್‌ 2ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರಿಂದ ಸಿಂಗ್‌ ಅವರ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ.

ತುರ್ತು ಪರಿಸ್ಥಿತಿಯಲ್ಲಿ ಬಂಧನ: ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿದ್ದ ಅವರನ್ನು 1975ರ ಜೂನ್‌ 26ರಂದು ಬಂಧಿಸಲಾಯಿತು. ತಮ್ಮ ಭಾರತೀಯ ಲೋಕದಳ ಪಕ್ಷವನ್ನು ಜನತಾ ಪಕ್ಷದ ಜತೆ ವಿಲೀನಗೊಳಿಸಿದ ಅವರು ಜನತಾ ಪಕ್ಷದ ಸ್ಥಾಪಕ ಸದಸ್ಯರಲ್ಲೂ ಒಬ್ಬರಾಗಿದ್ದರು. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಜನತಾ ಪಕ್ಷದ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವರು, 1979ರಲ್ಲಿ ಹಣಕಾಸು ಸಚಿವರಾಗಿ, ನಂತರ ಉಪ ಪ್ರಧಾನಿ ಆಗಿ ಕಾರ್ಯ ನಿರ್ವಹಿಸಿದರು.

ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಿ ಆಗುವ ತುಡಿತ ಹೊಂದಿದ್ದ ಸಿಂಗ್‌, ಅವರಿಗೆ ಅಂತಿಮವಾಗಿ ಜನತಾ ಪಕ್ಷ ವಿಭಜನೆಯಾದಾಗ ಈ ಅವಕಾಶ ಒದಗಿ ಬಂದಿತು. ಅವರು ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ 1977ರ ಜುಲೈ 28ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ 1967ರಲ್ಲಿ ಅವರು ಕಾಂಗ್ರೆಸ್‌ ಅನ್ನು ಬಲವಾಗಿ ವಿರೋಧಿಸಿದ್ದರು. 

ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಅಲ್ಪಾವಧಿಗೆ ಮಾತ್ರ. ಕಾಂಗ್ರೆಸ್‌ ಬೆಂಬಲ ಹಿಂಪಡೆದ ಕಾರಣ ಅವರು 1979ರ ಆಗಸ್ಟ್‌ 20ರಲ್ಲಿ ರಾಜೀನಾಮೆ ನೀಡಿದರು. ನಂತರ 1980ರ ಜನವರಿ 14ರವರೆಗೆ ಹಂಗಾಮಿ ಪ್ರಧಾನಿಯಾಗಿದ್ದರು.

ಸಿಂಗ್‌ ಸಾಧನೆಗಳು: 1953ರಲ್ಲಿ ಭೂ ಹಿಡುವಳಿಗಳ ಬಲವರ್ಧನೆ ಕಾಯ್ದೆ, ಉತ್ತರ ಪ್ರದೇಶ ಜಮೀನ್ದಾರಿ ಮತ್ತು ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿದರು. ಇವು ರಾಜ್ಯದಲ್ಲಿ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಲು ಕಾರಣವಾದವು. 1964ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ಅಂಗೀಕರಿಸುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಸುಧಾರಿಸಿದರು. ಸಿಂಗ್‌ ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆಗಳಿಂದ ಅನೇಕ ಕೃಷಿಕರು ಸಶಕ್ತರಾದರು. ಭೂಮಿ ಇಲ್ಲದವರಿಗೆ ಭೂಮಿಯ ಮಾಲಿತ್ವ ದೊರೆಯಿತು. ಇದು ರೈತರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸಿತು.

ಗ್ರಾಮೀಣ ವಿದ್ಯುದೀಕರಣ, ನಬಾರ್ಡ್‌ನಂತಹ ಸಂಸ್ಥೆಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ದೇಶದ ಪ್ರಮುಖ ಆರ್ಥಿಕ ತಜ್ಞರೂ ಆಗಿದ್ದರು. ಅವರು ‘ಇಂಡಿಯನ್‌ ಎಕನಾಮಿಕ್‌ ಪಾಲಿಸಿ– ದಿ ಗಾಂಧಿಯನ್‌ ಬ್ಲೂ ಪ್ರಿಂಟ್‌’, ‘ಎಕಾನಿಮಿಕ್‌ ನೈಟ್ಮೇರ್‌ ಆಫ್‌ ಇಂಡಿಯಾ– ಇಟ್ಸ್‌ ಕಾಸ್‌ ಅಂಡ್ಯ ಕ್ಯೂರ್‌’ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

‘ಅಬಾಲಿಷನ್‌ ಆಫ್‌ ಜಮೀನ್ದಾರಿ‘, ‘ಅಗ್ರೇರಿಯನ್‌ ರೆವೊಲ್ಯೂಷನ್‌ ಇನ್‌ ಉತ್ತರ ಪ್ರದೇಶ’, ‘ಇಂಡಿಯಾಸ್‌ ಪಾವರ್ಟಿ ಅಂಡ್ ಇಟ್ಸ್‌ ಸಲ್ಯೂಷನ್‌‘, ‘ಲ್ಯಾಂಡ್‌ ರಿಫಾರ್ಮ್ಸ್‌ ಇನ್‌ ಯುಪಿ ಅಂಡ್‌ ದಿ ಕುಲಕ್ಸ್‌’ ಅವರ ಇತರ ಮಹತ್ವದ ಕೃತಿಗಳಾಗಿವೆ. ಚೌಧರಿ ಚರಣ್‌ ಸಿಂಗ್‌ ಅವರು 1987ರ ಮೇ 29ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಒಲಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT