ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಚುನಾವಣೆ: ದಿಮಾನಿಯಲ್ಲಿ ‘ಕಮಲ’ದ ಬೆಳೆ ತೆಗೆಯುತ್ತಾರಾ ತೋಮರ್‌?

ನರೇಂದ್ರ ಸಿಂಗ್ ತೋಮರ್‌
Published 12 ನವೆಂಬರ್ 2023, 20:52 IST
Last Updated 12 ನವೆಂಬರ್ 2023, 20:52 IST
ಅಕ್ಷರ ಗಾತ್ರ

ದಿಮಾನಿ (ಮಧ್ಯಪ್ರದೇಶ): ಲೋಕಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಇರುವ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ಬಡಿದಾಡುವ ರಿಸ್ಕ್‌ ತೆಗೆದುಕೊಳ್ಳಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಅವರಿಗೆ ಸುತಾರಾಂ ಇಷ್ಟ ಇರಲಿಲ್ಲ. ರಾಜ್ಯದಲ್ಲಿ 19 ವರ್ಷಗಳ ಸುದೀರ್ಘ ಆಡಳಿತದಿಂದ ಎದುರಾದ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಲು ಬಿಜೆಪಿಯ ‘ಅಮಿತ’ ತಂತ್ರಗಾರರು ನೆಚ್ಚಿಕೊಂಡಿದ್ದು ತೋಮರ್‌ ಅವರಂತಹ ‘ಮಹಾರಥಿ’ಗಳನ್ನು. ದಿಮಾನಿಯ ಕಣಕ್ಕೆ ತೋಮರ್ ಅವರನ್ನು ಒತ್ತಾಯಪೂರ್ವಕವಾಗಿ ತಳ್ಳಿರುವ ವರಿಷ್ಠರು ಪದ್ಮದ ‘ಬೆಳೆ’ ತೆಗೆದುಕೊಂಡು ಬರಲು ಕಟ್ಟಪ್ಪಣೆ ಮಾಡಿದ್ದಾರೆ. 15 ವರ್ಷಗಳಿಂದ ಪಕ್ಷಕ್ಕೆ ಗೆಲುವು ಮರೀಚಿಕೆಯಾಗಿರುವ ಕಣದಲ್ಲಿ ತೋಮರ್ ಕಮಲ ಅರಳಿಸಲು ಏದುಸಿರು ಬಿಡುತ್ತಿದ್ದಾರೆ.

ಗ್ವಾಲಿಯರ್‌–ಚಂಬಲ್‌ ಭಾಗದಲ್ಲಿರುವ ದಿಮಾನಿ ಕ್ಷೇತ್ರವು ಬಿಜೆಪಿಗೆ ಕಷ್ಟದ ಕ್ಷೇತ್ರಗಳಲ್ಲಿ ಒಂದು. ರಾಜ್ಯದ ಮುಖ್ಯಮಂತ್ರಿಯಾಗಲು ನಾಲ್ಕೈದು ವರ್ಷಗಳಿಂದ ಹವಣಿಸುತ್ತಿರುವ ನರೇಂದ್ರ ಸಿಂಗ್‌ ಅವರಿಗೆ ಹೈಕಮಾಂಡ್ ಕಷ್ಟದ ಟಾಸ್ಕ್‌ ನೀಡಿದೆ. ತೋಮರ್ ಸ್ಪರ್ಧೆಯಿಂದ ಆಸುಪಾಸಿನ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲವಾಗಬಹುದು ಎಂಬುದು ಬಿಜೆಪಿ ವರಿಷ್ಠರ ಅಂದಾಜು. ಆದರೆ, ತೋಮರ್‌ ಅವರನ್ನು ಹಣಿಯಲು ಬಿಜೆಪಿಯ ಒಂದು ಗುಂಪು ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ತೋಮರ್‌ ಮೊದಲ ಆಯ್ಕೆಯಾಗುತ್ತಾರೆ ಎಂಬುದು ಈ ಬಣದ ಆತಂಕ. 

2020ರಲ್ಲಿ ಇಲ್ಲಿ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ‘ಆ‍ಪರೇಷನ್‌’ ಮಾಡಿತ್ತು. ಆ ಬಳಿಕ ನಡೆದ ಚುನಾವಣೆಯಲ್ಲಿ ಗೆಲುವು ಸಿಕ್ಕಿದ್ದು ಕಾಂಗ್ರೆಸ್‌ನ ರವೀಂದ್ರ ಸಿಂಗ್‌ ತೋಮರ್ ಅವರಿಗೆ. ಈ ಸಲವೂ ನರೇಂದ್ರನಿಗೆ ರವೀಂದ್ರ ಸವಾಲು ಒಡ್ಡಲು ಸಜ್ಜಾಗಿದ್ದಾರೆ. ಇಲ್ಲಿ ಬಹುಜನ ಸಮಾಜವಾದಿ ಪಕ್ಷ ಭದ್ರ ನೆಲೆ ಹೊಂದಿದೆ. 2013ರಲ್ಲಿ ಬಿಎಸ್‌ಪಿ ಗೆಲುವು ಸಾಧಿಸಿತ್ತು. ಆಗ ಗೆದ್ದಿದ್ದ ಬಲ್ವೀರ್ ಸಿಂಗ್‌ ದಂಡೋಟಿಯಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಠಾಕೂರರು ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಸುಮಾರು 60 ಸಾವಿರ ಮತದಾರರು ಇದ್ದಾರೆ. ನಂತರದ ಸ್ಥಾನದಲ್ಲಿರುವುದು ಬ್ರಾಹ್ಮಣರು ಹಾಗೂ ಪರಿಶಿಷ್ಟ ಜಾತಿಯವರು. ಬಿಎಸ್‌ಪಿ ಅಭ್ಯರ್ಥಿ ಬ್ರಾಹ್ಮಣ ಸಮಯದಾಯದವರು. ‘ಕಾಂಗ್ರೆಸ್‌ನ ಒಂದಷ್ಟು ಮತಗಳನ್ನು ಬಿಎಸ್‌ಪಿ ಅಭ್ಯರ್ಥಿ ಕಿತ್ತು ಕೊಳ್ಳುತ್ತಾರೆ. ಬಿಎಸ್‌ಪಿ ಅಭ್ಯರ್ಥಿ ಹೆಚ್ಚು ಮತ ಪಡೆದಷ್ಟು ಬಿಜೆಪಿಗೆ ಅನುಕೂಲ. ಆಗ ತೋಮರ್ ಅವರು ಸುಲಭದಲ್ಲಿ ಗೆಲುವಿನ ದಡ ಮುಟ್ಟುತ್ತಾರೆ’ ಎಂಬುದು ಸ್ಥಳೀಯ ಬಿಜೆಪಿ ಮುಖಂಡ ಪ್ರಹ್ಲಾದ್‌ ಸಿಂಗ್‌ ತೋಮರ್ ವಿಶ್ವಾಸದಿಂದ ಹೇಳುತ್ತಾರೆ. 

‘2018ರ ವಿಧಾನಸಭಾ ಚುನಾವಣೆಯಲ್ಲಿ ಗ್ವಾಲಿಯರ್‌–ಚಂಚಲ್‌ ಭಾಗದ 34 ಸ್ಥಾನಗಳ ಪೈಕಿ 26ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಬಿಜೆ‍ಪಿಗೆ ಹೆಚ್ಚು ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿದ್ದು ಈ ಭಾಗದಲ್ಲೇ. ಈ ಸಲವೂ ಬಿಜೆಪಿ ಪರವಾದ ವಾತಾವರಣ ಇಲ್ಲ. ಬಿಜೆಪಿ ಹೈಕಮಾಂಡ್‌ಗೆ ಈ ಸುಳಿವು ಸಿಕ್ಕಿಯೇ ತೋಮರ್‌ ಸೇರಿದಂತೆ ಹಲವು ಸಂಸದರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಿದೆ. ಹಲವು ಶಾಸಕರಿಗೆ ಮುಲಾಜಿಲ್ಲದೆ ಟಿಕೆಟ್‌ ನಿರಾಕರಿಸಿದೆ. ಟಿಕೆಟ್ ಸಿಕ್ಕ ಮೇಲೆ 15 ದಿನ ಬಿಜೆಪಿ ಅಭ್ಯರ್ಥಿ ಕ್ಷೇತ್ರದತ್ತ ತಲೆ ಹಾಕಲೇ ಇಲ್ಲ. ಆ ಸಮಯದಲ್ಲಿ ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಒಂದು ಸುತ್ತಿನ ಪ್ರಚಾರ ಮುಗಿಸಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸಚಿವರು ದಂಡು ಕಟ್ಟಿಕೊಂಡು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ’ ಎಂದು ಉಪನ್ಯಾಸಕ ಭುವನೇಶ್‌ ಸಿಂಗ್‌ ತೋಮರ್‌ ವಿಶ್ಲೇಷಿಸುತ್ತಾರೆ. 

ದಿಮಾನಿಯ ಹೋಟೆಲೊಂದರಲ್ಲಿ ಮಾತಿಗೆ ಸಿಕ್ಕ ಯುವಕ ದಿನೇಶ್‌ ಯಾದವ್‌, ‘ತೋಮರ್ ಅವರು ಮೂರು ಅವಧಿಗೆ ಶಾಸಕ ಆಗಿದ್ದರು. ರಾಜ್ಯದಲ್ಲಿ ಸಚಿವರೂ ಆಗಿದ್ದರು. ಕೇಂದ್ರ ಸಚಿವರೂ ಆಗಿದ್ದಾರೆ. ಆದರೆ, ಬಹುಕಾಲದಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆಗಳನ್ನು ಈ ಭಾಗಕ್ಕೆ ತಂದಿಲ್ಲ. ರಸ್ತೆಗಳ ಅಭಿವೃದ್ಧಿ ಮಾಡಿಸಿದ್ದಾರೆ. ಸಣ್ಣ ಅಣೆಕಟ್ಟುಗಳನ್ನು ಕಟ್ಟಿಸಿದ್ದಾರೆ. ಇಷ್ಟು ಮಾಡಿದರೆ ಸಾಕೇ’ ಎಂದು ಕೇಳುತ್ತಾರೆ. 

ಅವರ ಜತೆಗಿದ್ದ ದಯಾಳ್‌ ಶರ್ಮಾ, ‘ಶಿವರಾಜ್ ಸಿಂಗ್‌ ಚೌಹಾಣ್ ಹಾಗೂ ನರೇಂದ್ರ ಸಿಂಗ್ ತೋಮರ್ ಅವರಿಗೆ ದೂರದೃಷ್ಟಿ ಇಲ್ಲ. ನರೇಂದ್ರ ಮೋದಿ ಅವರು 12 ವರ್ಷಗಳಲ್ಲೇ ಗುಜರಾತ್‌ನ ಸಮಗ್ರ ಅಭಿವೃದ್ಧಿ ಮಾಡಿದರು. ಪ್ರಧಾನಿಯಾಗಿ 9 ವರ್ಷಗಳಲ್ಲಿ ದೇಶದ ಚಹರೆ ಬದಲಿಸಿದ್ದಾರೆ. ಪಕ್ಕದ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ’ ಎಂದರು. ‘ಯಾವ ಅಭಿವೃದ್ಧಿ’ ಎಂದು ಪ್ರಶ್ನಿಸಿದರೆ, ‘ನೂರಾರು ಎನ್‌ಕೌಂಟರ್‌ ಮಾಡಿಸಿದ್ದಾರಲ್ಲ’ ಎಂದು ಮಾರುತ್ತರ ನೀಡಿದರು. ‘ಅದು ಅಭಿವೃದ್ಧಿಯೇ’ ಎಂದು ಕೇಳಿದರೆ, ‘ಅಪರಾಧ ಕಡಿಮೆಯಾದರೆ ಅಭಿವೃದ್ಧಿ ತಂತಾನೆ ಆಗುತ್ತದೆ’ ಎಂದರು. 

ಭೋಲರಾಂಪುರದ ಕೃಷಿಕ ಮಲ್ಖಾನ್‌ ಸಿಂಗ್‌, ‘ಕಳೆದ 10 ವರ್ಷಗಳಿಂದ ಇಲ್ಲಿ ಭಾರಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ಶಾಸಕರಿಗೆ ಅನುದಾನ ಸಿಕ್ಕಿದ್ದೇ ಕಡಿಮೆ. ಇಲ್ಲಿ ಬಿಜೆಪಿ ಶಾಸಕರು ಬಂದರೆ ಅಭಿವೃದ್ಧಿಗೆ ವೇಗ ಸಿಗಲಿದೆ’ ಎಂದು ಹೇಳುತ್ತಾರೆ. ‘ಮೊರೆನಾ ಕ್ಷೇತ್ರದಲ್ಲಿ ಗೆದ್ದು ನರೇಂದ್ರ ಸಿಂಗ್‌ ಅವರು ದೇಶದ ದೊಡ್ಡ ಮಂತ್ರಿ ಆಗಿದ್ದಾರೆ. ಅವರು ರಾಜ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು. ಅದಕ್ಕಾಗಿ ಅವರನ್ನು ಗೆಲ್ಲಿಸುತ್ತೇವೆ’ ಎಂದೂ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT