ಪಂಧುರ್ನಾ: ಮಧ್ಯಪ್ರದೇಶದ ಭೋಪಾಲ್‌ನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್, ಮಹಾರಾಷ್ಟ್ರ ಗಡಿಯ ಪಂಧುರ್ನಾ ಜಿಲ್ಲೆಯಲ್ಲಿ ಪಲ್ಟಿಯಾಗಿದೆ. ಅವಘಡದಿಂದಾಗಿ ಬಸ್‌ನಲ್ಲಿದ್ದವರಲ್ಲಿ ಐವರು ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೋಹಿತ್ ಘಾಟ್‌ನಲ್ಲಿ ರಾತ್ರಿ 10ರ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಬ್ರಿಜೇಶ್ ಭಾರ್ಗವ ತಿಳಿಸಿದ್ದಾರೆ.
ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ನಾಲ್ಕು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದುರಂತ ನಡೆದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರು. ಘಟನಾ ಸ್ಥಳದಿಂದ 60 ಕಿ.ಮೀ. ದೂರದಲ್ಲಿರುವ ನಾಗ್ಪುರ ಆಸ್ಪತ್ರೆಯಲ್ಲಿ ಇನ್ನಿಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಪಘಾತವಾದಾಗ ಬಸ್ ಪ್ರತಿ ಗಂಟೆಗೆ 110 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದೂ ಹೇಳಿದ್ದಾರೆ.