ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡು ತಮ್ಮದೆಂದು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಯುವಕರು: ಪೊಲೀಸರ ಪರಿಹಾರ ಹೀಗಿತ್ತು...

Published 1 ಜುಲೈ 2023, 10:15 IST
Last Updated 1 ಜುಲೈ 2023, 10:15 IST
ಅಕ್ಷರ ಗಾತ್ರ

ರೆವಾ: ಆಡೊಂದರ (ಮೇಕೆ) ಮಾಲೀಕತ್ವ ನಿರ್ಧರಿಸುವ ಫಜೀತಿಗೆ ಮಧ್ಯಪ್ರದೇಶದ ರೆವಾ ನಗರದ ಪೊಲೀಸರು ಬಿದ್ದಿದ್ದಾರೆ. ಇಬ್ಬರು ವ್ಯಕ್ತಿಗಳು ಆಡೊಂದನ್ನು ತಮ್ಮದೆಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಡಿನ ನೈಜ ಮಾಲೀಕರು ಯಾರು ಎನ್ನುವ ಕಗ್ಗಂಟನ್ನು ಬಿಡಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

20 ವರ್ಷದ ಆಸುಪಾಸಿನ ಸಂಜಯ್‌ ಖಾನ್‌ ಹಾಗೂ ಶಾರೂಖ್‌ ಖಾನ್ ಎಂಬವರ ನಡುವೆ 2 ವರ್ಷದ ಆಡಿನ ಮಾಲೀಕತ್ವದ ಬಗ್ಗೆ ತಕರಾರು ಉಂಟಾಗಿದೆ. ಹೀಗಾಗಿ ಬುಧವಾರ ಇಬ್ಬರೂ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿದ್ದಾರೆ. ಠಾಣೆಯ ಇನ್ಸ್‌ಪೆಕ್ಟರ್‌ ಹತೇಂದ್ರನಾಥ್‌ ಶರ್ಮಾ ಅವರು ಇವರಿಬ್ಬರ ವಾದ ಕೇಳಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈ ಆಡನ್ನು ತಾನು ಬೆಳೆಸಿದ್ದು, ಆರು ತಿಂಗಳ ಹಿಂದೆ ಕಾಣೆಯಾಗಿದೆ ಎನ್ನುವುದು ಸಂಜಯ್‌ ಅವರ ವಾದ. ಆದರೆ ಈ ಆಡನ್ನು ಬಕ್ರೀದ್‌ಗೆ ಬಲಿ ಕೊಡಲು ₹15,000 ಕೊಟ್ಟು ಇತ್ತೀಚೆಗೆ ಖರೀದಿ ಮಾಡಿದ್ದೇನೆ. ಹೀಗಾಗಿ ಆಡು ತನಗೇ ಸೇರಬೇಕು ಎಂದು ಶಾರೂಖ್‌ ಹಕ್ಕು ಸಾಧಿಸಿದ್ದಾರೆ.

ಆಡು ತಮ್ಮದೆಂದು ಸಾಬೀತುಪಡಿಸುವ ಪುರಾವೆಯನ್ನು ಹಾಜರಿಪಡಿಸಬೇಕು ಎಂದು ಇಬ್ಬರಿಗೂ ತಿಳಿಸಲಾಗಿತ್ತು. ಮರುದಿನ ಸಂಜಯ್‌ ಹಾಗೂ ಶಾರೂಖ್‌ ಇಬ್ಬರು ಆಡಿನ ಚಿತ್ರವನ್ನು ಪೊಲೀಸರ ಮುಂದಿಟ್ಟಿದ್ದಾರೆ. ಎರಡೂ ಚಿತ್ರ ಒಂದೇ ರೀತಿಯಾಗಿದ್ದುದ್ದರಿಂದ ಪ್ರಕರಣ ಮತ್ತಷ್ಟು ಜಟಿಲವಾಗಿದೆ.

ದೈನಂದಿನ ಕೆಲಸಗಳಿಗೆ ತೊಂದರೆಯಾಗುವುದರಿಂದ ಹಾಗೂ, ಅದಕ್ಕೆ ದಿನಂಪ್ರತಿ ಆಹಾರ ನೀಡಬೇಕಾಗಿರುವುದರಿಂದ ಪೊಲೀಸ್‌ ಠಾಣೆಯಲ್ಲಿ ಆಡನ್ನು ಇರಿಸುವುದು ಪೊಲೀಸರಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಈ ವ್ಯಾಜ್ಯವನ್ನು ಪರಿಹರಿಸುವ ಹೊಣೆಯನ್ನು ಸ್ಥಳೀಯ ಕಾರ್ಪೊರೇಟರ್‌ ಹೆಗಲಿಗೆ ಪೊಲೀಸರು ವಹಿಸುತ್ತಾರೆ.

ರಾಜಿ ಸಂಧಾನದ ಅನ್ವಯ ಸದ್ಯ ಆಡನ್ನು ಸಂಜಯ್‌ ಇಟ್ಟುಕೊಳ್ಳಬೇಕು. ಆಡಿಗೆ ಯಾವುದೇ ಸಮಸ್ಯೆ ಮಾಡಬಾರದು ಎಂದು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಜಯ್‌ ಬಳಿ ಇದ್ದ ಆಡು ಆರು ತಿಂಗಳ ಹಿಂದೆ ಕಾಣೆಯಾಗಿದ್ದು, ಇತ್ತೀಚೆಗೆ ಯಾರೋ ಅದನ್ನು ಶಾರೂಖ್‌ಗೆ ಮಾರಾಟ ಮಾಡಿದ್ದಾರೆ. ಆಡಿನ ವ್ಯವಹಾರಕ್ಕೆ ಪತ್ರಗಳು ಇರದಿರುವುದರಿಂದ ನೈಜ ಮಾಲೀಕರ ಪತ್ತೆ ಕಷ್ಟವಾಗಿದೆ ಎನ್ನುವುದು ಪೊಲೀಸರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT