ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಮೀರಿ ಆಸ್ತಿ ಗಳಿಕೆ: 3 ವರ್ಷ ಶಿಕ್ಷೆಗೆ ಗುರಿಯಾಗಿರುವ DMKಯ ಪೊನ್ಮುಡಿ ಯಾರು?

Published 21 ಡಿಸೆಂಬರ್ 2023, 10:41 IST
Last Updated 21 ಡಿಸೆಂಬರ್ 2023, 10:41 IST
ಅಕ್ಷರ ಗಾತ್ರ

ಚೆನ್ನೈ: ವಿವಿಧ ಕಾರಣಗಳಿಗಾಗಿ ಶಿಕ್ಷೆಗೆ ಗುರಿಯಾದ ಶಾಸಕರು ಹಾಗೂ ಸಂಸದರು ತಮ್ಮ ಸ್ಥಾನ ಕಳೆದುಕೊಂಡ ಇತ್ತೀಚಿನ ತಾಜಾ ಉದಾಹರಣೆಗಳಿಗೆ ತಮಿಳುನಾಡಿನ ಸಚಿವ (ಈಗ ಮಾಜಿ) ಪೊನ್ಮುಡಿ.

1950ರಲ್ಲಿ ಜನಿಸಿದ ಕೆ.ದೈವಸಿಂಗಮಣಿ ನಂತರ ಪೊನ್ಮುಡಿ ಎಂದು ಜನಪ್ರಿಯತೆ ಪಡೆದರು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಹಿರಿಯ ನಾಯಕರಾದ ಇವರು, ಸದ್ಯ ಆಡಳಿತದಲ್ಲಿರುವ ಎಂ.ಕೆ.ಸ್ಟಾಲಿನ್ ಸಚಿವ ಸಂಪುಟದಲ್ಲಿ ಐದನೆಯವರು. ಆರು ಬಾರಿ ಶಾಸಕರಾಗಿರುವ ಪೊನ್ಮುಡಿ ನಾಲ್ಕು ಬಾರಿ ವಿಲ್ಲುಪುರಂ ಕ್ಷೇತ್ರದಿಂದ ಹಾಗೂ ಎರಡು ಬಾರಿ ತಿರುಕ್ಕೊಯಿಲೂರ್ ಕ್ಷೇತ್ರದಿಂದ ಗೆದ್ದಿದ್ದಾರೆ.

ಚಿದಂಬರಂನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಪೊನ್ಮುಡಿ ಒಬ್ಬ ಉತ್ತಮ ವಾಗ್ಮಿ. ವಿಲ್ಲುಪುರಂ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ನಂತರ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. ವಿಲ್ಲುಪುರಂ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಿದ್ದ ಇವರು, ನಂತರ ಉತ್ತರ ತಮಿಳುನಾಡು ಭಾಗದ ಜನಪ್ರಿಯ ನಾಯಕರೆನಿಸಿಕೊಂಡಿದ್ದರು.

ಪ್ರಾಧ್ಯಾಪಕ ವೃತ್ತಿಯಲ್ಲಿರುವಾಗಲೇ ಮೂಲ ಡಿಎಂಕೆ ಜೊತೆ ಸಖ್ಯ ಹೊಂದಿದ್ದ ಪೊನ್ಮುಡಿ, ಪಕ್ಷದ ಸ್ಟಾರ್ ಪ್ರಚಾರಕ ಎನಿಸಿಕೊಂಡಿದ್ದರು. ಸಾಮಾಜಿಕ ಸುಧಾರಕ ಇ.ವಿ.ಆರ್. ಪೆರಿಯಾರ್ ಅವರ ವಿಚಾರಧಾರೆ ಹಾಗೂ ದ್ರಾವಿಡ ಚಳವಳಿಯನ್ನು ತಮ್ಮ ಭಾಷಣದಲ್ಲಿ ಧಾರಾಳವಾಗಿ ಬಳಸುತ್ತಿದ್ದ ಅವರು, ಜನರ ಮನಗೆಲ್ಲುವ ನಾಯಕರೆನಿಸಿಕೊಂಡರು.

ನಂತರ ಕೆ.ವೀರಮಣಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಪೊನ್ಮುಡಿ 1980ರಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಸೇರಿದರು. ಅದಕ್ಕೂ ಪೂರ್ವದಲ್ಲಿ ತಮ್ಮ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿದರು. 1989ರಲ್ಲಿ ಡಿಎಂಕೆ ತನ್ನ ಪಕ್ಷದ ಹಿರಿಯರನ್ನು ಕಡೆಗಣಿಸಿ ಕಿರಿಯರಾದ ಪೊನ್ಮುಡಿಗೆ ವಿಲ್ಲುಪುರಂ ಕ್ಷೇತ್ರದ ಟಿಕೆಟ್ ನೀಡಿತ್ತು. ತಮ್ಮ ಚೊಚ್ಚಲ ಚುನಾವಣೆಯಲ್ಲಿ ಗೆದ್ದ ಪೊನ್ಮುಡಿ ಅವರನ್ನು ಆರೋಗ್ಯ ಸಚಿವರನ್ನಾಗಿ ಪಕ್ಷ ನೇಮಿಸಿತು. 

1996ರಲ್ಲಿ ಸಾರಿಗೆ ಮಂತ್ರಿ, 2006ರಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ 2021ರಲ್ಲೂ ಅದೇ ಖಾತೆಯಲ್ಲಿ ಮುಂದುವರಿದರು. 

ಪೊನ್ಮುಡಿ ಕುಟುಂಬ ಒಡೆತನದಲ್ಲಿದೆ ಹಲವು ಶಿಕ್ಷಣ ಸಂಸ್ಥೆಗಳು

ರಾಜಕೀಯ ಹೊರತುಪಡಿಸಿ ಪೊನ್ಮುಡಿ ಅವರ ಕುಟುಂಬ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಜತೆಗೆ ಹಲವು ಉದ್ಯಮಗಳೂ ಇವೆ. 11 ವರ್ಷಗಳ ಹಿಂದೆ ಅಕ್ರಮ ಆಸ್ತಿಗಳಿಕೆಗೆ ಸಂಬಂಧಿಸಿದ ಪ್ರಕರಣದೊಂದಿಗೆ ಮದ್ರಾಸ್ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಸದ್ಯ ಇದರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿದೆ.

ಪೊನ್ಮುಡಿ ಅವರ ಮಗ ಗೌತಮ್ ಸಿಗಮಣಿ ಅವರು ಕಲ್ಲಕುರುಚಿ ಕ್ಷೇತ್ರದ ಸಂಸದರಾಗಿದ್ದಾರೆ. ಅವರ ಮೇಲೂ ಇ.ಡಿ. ಕಣ್ಣಿಟ್ಟಿದ್ದು, 2020ರಲ್ಲಿ ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಹರಿತವಾದ ಮಾತುಗಳಿಗಾಗಿಯೇ ಹೆಸರುವಾಸಿಯಾಗಿರುವ ಪೊನ್ಮುಡಿ ಅವರು ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದೂ ಇದೆ. ಸರ್ಕಾರಿ ಯೋಜನೆಯಡಿ ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಕುರಿತು ಹಗುರವಾಗಿ ಮಾತನಾಡಿದ್ದು ಇದಕ್ಕೆ ಒಂದು ಉದಾಹರಣೆ.

ಸ್ಟಾಲಿನ್ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾದ ನಂತರ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಟೀಕಿಸಿದ ಹಾಗೂ ರಾಜ್ಯಪಾಲರು ಅಧ್ಯಕ್ಷತೆ ವಹಿಸುವ ಘಟಿಕೋತ್ಸವಗಳಿಗೆ ಗೈರಾಗುವ ಮೂಲಕವೂ ಸುದ್ದಿಯಲ್ಲಿದ್ದವರು ಪೊನ್ಮುಡಿ. 

ನ್ಯಾಯಾಲಯದ ಶಿಕ್ಷೆಗೆ ಗುರಿಯಾದವರಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಎಐಎಡಿಎಂಕೆಯ ಜಯಲಲಿತಾ, ಸಮಾಜವಾದಿ ಪಕ್ಷದ ಆಜಂ ಖಾನ್ ಕೂಡಾ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT