ಮುಂಬೈ: ಮರಾಠ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರಾತ್ಮಕ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ನೀಡಲು ಮೂವರು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಸೋಮವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಮಿತಿಯು ಮೂವರು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಿರಲಿದೆ’ ಎಂದು ಹೇಳಿದರು. ಮರಾಠ ಸಮುದಾಯಕ್ಕೆ ‘ಕುಣಬಿ’ ಜಾತಿ ಪ್ರಮಾಣಪತ್ರ ನೀಡುವುದು ಹೇಗೆ ಎಂಬ ಬಗ್ಗೆ ವರದಿ ನೀಡಲು ನಿವೃತ್ತ ನ್ಯಾಯಾಧೀಶ ಸಂದೀಪ್ ಶಿಂದೆ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಇದು ಮಂಗಳವಾರ ವರದಿ ಸಲ್ಲಿಸಲಿದೆ. ನಂತರ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.