ಮುಂಬೈ: ಪತ್ನಿಯೊಂದಿಗೆ ಜಗಳವಾಡಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮಹಾರಾಷ್ಟ್ರ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಹ್ಮದನಗರ ಜಿಲ್ಲೆಯ ಕಾರ್ಜಟ್ ಪ್ರದೇಶದ ಅಲ್ಸುಂಡೆ ಎಂಬಲ್ಲಿ ಭಾನುವಾರ ಸಂಜೆ ಸುಮಾರು 4.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಆರೋಪಿ ಗೋಕುಲ್ ಕ್ಷಿರ್‌ಸಾಗರ್, ತನ್ನ ಎಂಟು ವರ್ಷದ ಪುತ್ರಿ ರುತುಜಾ ಹಾಗೂ ನಾಲ್ಕು ವರ್ಷದ ಪುತ್ರ ವೇದಾಂತ್ ಅನ್ನು ಕರೆದುಕೊಂಡು ಕೋಪದಿಂದ ಮನೆ ತೊರೆದಿದ್ದಾನೆ. ಬಳಿಕ ಗ್ರಾಮದ ಬಾವಿಗೆ ಇಬ್ಬರು ಮಕ್ಕಳನ್ನು ಬಿಸಾಡಿದ್ದಾನೆ.
ಘಟನೆಯ ಮಾಹಿತಿ ಸಿಕ್ಕಕೂಡಲೇ ಪೊಲೀಸರು ಕಾರ್ಯಪ್ರವೃತರಾಗಿದ್ದು, ದುರ್ದೈವವಶಾತ್ ಬಾವಿಯಿಂದ ರಕ್ಷಿಸುವ ಮುನ್ನವೇ ಮಕ್ಕಳು ಅಸುನೀಗಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ 302ನೇ ವಿಧಿಯಡಿ (ಕೊಲೆ) ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.