ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ₹ 300 ಕೋಟಿ ಆಸ್ತಿಗೆ ಮಾವನ ಕೊಲೆ: ಸೊಸೆ ಬಂಧನ

Published 12 ಜೂನ್ 2024, 19:37 IST
Last Updated 12 ಜೂನ್ 2024, 19:37 IST
ಅಕ್ಷರ ಗಾತ್ರ

ನಾಗ್ಪುರ: ನಾಗ್ಪುರದಲ್ಲಿ ಇತ್ತೀಚೆಗೆ ನಡೆದ ಗುದ್ದೋಡು (ಹಿಟ್ ಆ್ಯಂಡ್‌ ರನ್)  ಪ್ರಕರಣದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆದರೆ, ಇದು ಅಪಘಾತವಲ್ಲ, ಸೊಸೆ ತನ್ನ ಮಾವನ ₹ 300 ಕೋಟಿ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿ, ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. 

ಈ ಸಂಬಂಧ ಮಹಾರಾಷ್ಟ್ರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ(ಎಂಎಸ್‌ಎಂಇ) ಇಲಾಖೆಯ ನಿರ್ದೇಶಕರಾದ ಅರ್ಚನಾ ಮನೀಷ್‌ ಪುಟ್ಟೇವಾರ್‌ (53) ಅವರನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದರು. 15 ದಿನಗಳ ಹಿಂದೆ ವ್ಯಾಪಾರಿ ಪುರುಷೋತ್ತಮ ಪುಟ್ಟೇವಾರ್‌ ಅವರು ಕಾರು ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸೊಸೆಯನ್ನು ಬಂಧಿಸಲಾಗಿದೆ.

ಅರ್ಚನಾ ಅವರು ತನ್ನ ಮಾವನಿಗೆ ಕಾರು ಡಿಕ್ಕಿ ಹೊಡೆಸಿ ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸಿ, ಸುಮಾರು ₹ 1 ಕೋಟಿ ಖರ್ಚು ಮಾಡಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕೃತ್ಯಕ್ಕಾಗಿ ಕಾರು ಖರೀದಿಸಲು ಅವರು ಆರೋಪಿಗೆ ಹಣ ಪಾವತಿಸಿ, ಕೊಲೆಯನ್ನು ಅಪಘಾತದಂತೆ ಬಿಂಬಿಸಲು ಸಂಚು ರೂಪಿಸಿಸಿದ್ದರು. ಮಾವನ ₹ 300 ಕೋಟಿ ಆಸ್ತಿ ಲಪಟಾಯಿಸುವುದು ಆಕೆಯ ಉದ್ದೇಶವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

ಅರ್ಚನಾ ಅವರು ಈ ಕೃತ್ಯಕ್ಕಾಗಿ ತನ್ನ ಗಂಡನ (ವೈದ್ಯ ಮನೀಷ್‌) ಕಾರು ಚಾಲಕ ಬಾಗ್ಡೆ ಮತ್ತು ಇತರ ಇಬ್ಬರು ಆರೋಪಿಗಳಾದ ನೀರಜ್‌ ನಿಮ್ಜೆ ಮತ್ತು ಸಚಿನ್‌ ಧಾರ್ಮಿಕ್‌ ಅವರೊಂದಿಗೆ ಕೊಲೆಗೆ ಸಂಚು ರೂಪಿಸಿದ್ದರು. ಆರೋಪಿಗಳ ವಿರುದ್ಧ ಕೊಲೆ ಆಪಾದನೆ, ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆ ವಿವರ: ಪುರುಷೋತ್ತಮ ಪುಟ್ಟೇವಾರ್‌ ಅವರ ಪತ್ನಿ ಶಕುಂತಲಾ ಅವರಿಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಅವರು ಆಸ್ಪತ್ರೆಯಲ್ಲಿದ್ದರು. ಅವರನ್ನು ಭೇಟಿಯಾಗಲು ಪುರುಷೋತ್ತಮ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿಂದ ಹಿಂತಿರುಗುವಾಗ, ಬಾಡಿಗೆ ಕಾರು ಅವರ ಮೇಲೆ ಹರಿದಿತ್ತು.

ಕೊಲೆ ಪ್ರಕರಣದ ಆರೋಪಿಯಾಗಿರುವ ಅರ್ಚನಾ ಅವರು ಕಚೇರಿಯಲ್ಲಿಯೂ ಭಾರಿ ಅಕ್ರಮಗಳನ್ನು ನಡೆಸಿದ್ದಾರೆ ಎಂಬ ಆರೋಪಗಳಿವೆ. ಈ ಸಂಬಂಧ ಹಲವು ದೂರುಗಳು ಬಂದಿದ್ದರೂ ರಾಜಕೀಯ ಪ್ರಭಾವ ಬಳಸಿ ರಕ್ಷಣೆ ಪಡೆದಿದ್ದಾರೆ ಎಂಬುದು ಗೊತ್ತಾಗಿದೆ. ಇದೀಗ ಈ ಆರೋಪಗಳ ಕುರಿತೂ ತನಿಖೆ ನಡೆಯುವ ಸಾಧ್ಯತೆಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT