ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವಕ್ಕೆ ಮಲಯಾಳಂ ಸಾಹಿತಿ ರಾಧಾಕೃಷ್ಣನ್ ರಾಜೀನಾಮೆ

ಕೇಂದ್ರ ಸಾಹಿತ್ಯ ಅಕಾಡೆಮಿ ಆಡಳಿತವನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಖಂಡನೆ
Published 1 ಏಪ್ರಿಲ್ 2024, 14:48 IST
Last Updated 1 ಏಪ್ರಿಲ್ 2024, 14:48 IST
ಅಕ್ಷರ ಗಾತ್ರ

ಮಲಪ್ಪುರಂ (ಕೇರಳ): ಮಲಯಾಳಿ ಭಾಷೆಯ ಹೆಸರಾಂತ ಸಾಹಿತಿ ಸಿ. ರಾಧಾಕೃಷ್ಣನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅಕಾಡೆಮಿಯು ಇತ್ತೀಚೆಗೆ ಆಯೋಜಿಸಿದ್ದ 39ನೇ ‘ಸಾಹಿತ್ಯೋತ್ಸವ: ಪತ್ರಗಳ ಹಬ್ಬ’ವನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಉದ್ಘಾಟಿಸಿದ್ದರು. ಸಾಹಿತ್ಯದ ಗಂಧ–ಗಾಳಿ ಇಲ್ಲದವರು ಉತ್ಸವಕ್ಕೆ ಚಾಲನೆ ನೀಡಿದ್ದು, ಅದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿರುವುದಾಗಿ ರಾಧಾಕೃಷ್ಣನ್ ತಿಳಿಸಿದ್ದಾರೆ.

ಅಕಾಡೆಮಿಯ ಕಾರ್ಯದರ್ಶಿಗೆ ಅವರು ರಾಜೀನಾಮೆ ಪತ್ರವನ್ನು ಬರೆದಿದ್ದು, ತಾವು ಯಾವುದೇ ರಾಜಕೀಯ ಪಕ್ಷದ ವಿರೋಧಿಯಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ.

‘ಸಾಹಿತ್ಯ ಅಕಾಡೆಮಿಯು ಪರಂಪರಾಗತವಾಗಿ ಸ್ವಾಯತ್ತ ಸಂಸ್ಥೆಯಾಗಿಯೇ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ರಾಜಕಾರಣಿಗೆ ಮಣೆ ಹಾಕಲಾಗುತ್ತಿದೆ’ ಎಂದಿರುವ ಅವರು, ಮೊದಲಿನಿಂದಲೂ ರಾಜಕೀಯದ ನೆರಳಿನಿಂದ ಹೊರಗೇ ಉಳಿದಿದ್ದ ಅಕಾಡೆಮಿಯಲ್ಲಿ ಇಂತಹ ಬೆಳವಣಿಗೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಅಕಾಡೆಮಿಯ ದಿನನಿತ್ಯದ ಆಡಳಿತದಲ್ಲಿಯೂ ರಾಜಕಾರಣಿಗಳು ಮೂಗುತೂರಿಸುತ್ತಿದ್ದಾರೆ. ಸಂಸ್ಥೆಯ ಆಡಳಿತವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.

‘ರಾಜಕೀಯ ನಾಯಕರು ಅಕಾಡೆಮಿಯ ಸಂವಿಧಾನವನ್ನು ಮರುರೂಪಿಸುವ ಜಾಣತನ ತೋರುತ್ತಿದ್ದಾರೆ ಎಂದು ತಿಳಿಯಿತು. ದೇಶದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಜಾಸತ್ತಾತ್ಮವಾಗಿ ಇರುವ ಕೊನೆಯ ಸಂಸ್ಥೆಗೂ ಹೀಗೆ ಅಂತಿಮಸಂಸ್ಕಾರ ಮಾಡುವುದನ್ನು ಮೂಕಪ್ರೇಕನಾಗಿ ನೋಡಲು ನನ್ನಿಂದ ಸಾಧ್ಯವಿಲ್ಲ, ಕ್ಷಮಿಸಿ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

ರಾಧಾಕೃಷ್ಣನ್ ಅವರು ‘ಮುನ್ಬೇ ಪರಕ್ಕುನ್ನ ಪಕ್ಷಿಗಳ್’ (ಮೊದಲೇ ಹಾರುವ ಹಕ್ಕಿಗಳು), ‘ಸ್ಪಂದಮಾಪಿನಿಗಳೇ ನನ್ನಿ’ (ಭೂಕಂಪ ಅಳೆಯುವವರಿಗೆ ಕೃತಜ್ಞತೆಗಳು), ‘ತೀಕ್ಕಡಲ್ ಕಡಂಞು ತಿರುಮಧುರಂ’ (ಬೆಂಕಿಯ ಕಡಲು ಮಥಿಸಿ ಲಭಿಸಿದ ಮಾಧುರ್ಯ) ಕಾದಂಬರಿಗಳಿಂದ ಹೆಚ್ಚಿನ ಓದುಗರಿಗೆ ಪರಿಚಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT