ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉ.ಪ್ರದೇಶ: ಪೊಲೀಸ್ ನೇಮಕಾತಿ ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆ ಮಾರಾಟ, ಓರ್ವ ಬಂಧನ

Published 24 ಆಗಸ್ಟ್ 2024, 11:18 IST
Last Updated 24 ಆಗಸ್ಟ್ 2024, 11:18 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ ಮಾರಾಟದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ತಿಳಿಸಿದೆ.

ಈತ ಉತ್ತರ ಪ್ರದೇಶದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದನು ಎಂದು ಹೇಳಲಾಗಿದೆ.

ಆರೋಪಿಯನ್ನು ಅನಿರುದ್ಧ ಮೊದನ್‌ಲಾಲ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಯು ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಚಾನಲ್‌ಯೊಂದನ್ನು ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಪೊಲೀಸ್‌ ನೇಮಕಾತಿ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆ ನೀಡುವ ನೆಪದಲ್ಲಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದನು ಎಂದು ಪ್ರಕಟಣೆ ತಿಳಿಸಿದೆ.

ಈ ದಂಧೆಯ ಮಾಸ್ಟರ್‌ಮೈಂಡ್‌ ಅಭಯ್‌ ಕುಮಾರ್‌ ಶ್ರೀವಾಸ್ತವ್‌ ಜೊತೆಗೆ ಮೊದನ್‌ಲಾಲ್‌ ಸಂಪರ್ಕ ಹೊಂದಿದ್ದು, ಆತನ ನಿರ್ದೇಶನದ ಮೇರೆಗೆ ಟೆಲಿಗ್ರಾಂ ಚಾನಲ್‌ಯೊಂದನ್ನು ತೆರೆದು, ಪ್ರಶ್ನೆ ಪತ್ರಿಕೆ ನೀಡುವುದಾಗಿ ಅಭ್ಯರ್ಥಿಗಳಿಂದ ₹1 ಲಕ್ಷ ಹಣ ವಸೂಲಿ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವರ್ಷ ಫೆಬ್ರುವರಿ 17 ಮತ್ತು 18ರಂದು ನಡೆದಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು. ಬಳಿಕ ನೇಮಕಾತಿ ಪರೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿತ್ತು. ಆರು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.

ರಾಜ್ಯದಲ್ಲಿ ಆಗಸ್ಟ್‌ 23ರಿಂದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆ ಪ್ರಾರಂಭಗೊಂಡಿದ್ದು, ಆಗಸ್ಟ್‌ 31ರವರೆಗೆ ಪರೀಕ್ಷೆ ನಡೆಯಲಿದೆ. ಇಂದು (ಶನಿವಾರ) ರಾಜ್ಯದ 67 ಜಿಲ್ಲೆಗಳ 1,174 ಕೇಂದ್ರಗಳಲ್ಲಿ ನಡೆದ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಲಕ್ಷಗಟ್ಟಲೆ ಅಭ್ಯರ್ಥಿಗಳು ಹಾಜರಾಗಿದ್ದರು. ಬಿಗಿ ಭದ್ರತೆ ನಡುವೆ ಪರೀಕ್ಷೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT