ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದಾನ ಮಾಡಲು 440 ಕಿ.ಮೀ. ಪ್ರಯಾಣಿಸಿದ ‘ಬಾಂಬೆ’ ರಕ್ತ ಗುಂಪಿನ ವ್ಯಕ್ತಿ!

ಮಧ್ಯಪ್ರದೇಶದ ಮಹಿಳೆಯ ಜೀವ ರಕ್ಷಣೆ
Published 29 ಮೇ 2024, 14:24 IST
Last Updated 30 ಮೇ 2024, 3:09 IST
ಅಕ್ಷರ ಗಾತ್ರ

ಇಂದೋರ್: ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಮಹಿಳೆಯೊಬ್ಬರ ಜೀವ ಉಳಿಸುವುದಕ್ಕಾಗಿ, ಅಪರೂಪದ ‘ಬಾಂಬೆ’ ರಕ್ತ ಗುಂಪು ಹೊಂದಿರುವ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಶಿರಡಿಯಿಂದ ಮಧ್ಯಪ್ರದೇಶದ ಇಂದೋರ್‌ಗೆ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.

36 ವರ್ಷದ ರವೀಂದ್ರ ಅಷ್ಟೇಕರ್‌ ಎಂಬುವವರು 440 ಕಿ.ಮೀ. ದೂರ ಕ್ರಮಿಸಿ, ರಕ್ತದಾನ ಮಾಡುವ ಮೂಲಕ ಮಹಿಳೆಗೆ ನೆರವಾಗಿದ್ದಾರೆ. ಅವರು ಶಿರಡಿಯಲ್ಲಿ ಹೂವುಗಳ ಸಗಟು ಮಾರಾಟಗಾರರಾಗಿದ್ದಾರೆ.

ನಗರದಲ್ಲಿರುವ ಸರ್ಕಾರಿ ಒಡೆತನದ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 30 ವರ್ಷದ ಮಹಿಳೆಗೆ, ‘ಬಾಂಬೆ’ ಗುಂಪಿನ ರಕ್ತ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಅಶೋಕ ಯಾದವ್‌ ತಿಳಿಸಿದ್ದಾರೆ.

‘ಇಂದೋರ್‌ನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಆರೋಗ್ಯ ಗಂಭೀರವಾಗಿರುವ ಕುರಿತು ವಾಟ್ಸ್‌ಆ್ಯಪ್‌ನಲ್ಲಿನ ರಕ್ತದಾನಿಗಳ ಗುಂಪಿನ ಮೂಲಕ ನನಗೆ ಮಾಹಿತಿ ದೊರೆಯಿತು. ನನ್ನ ಸ್ನೇಹಿತರೊಬ್ಬರ ಕಾರಿನಲ್ಲಿ ಮೇ 25ರಂದು ಇಂದೋರ್‌ಗೆ ಪ್ರಯಾಣಿಸಿದೆ. ‘ಬಾಂಬೆ’ ರಕ್ತ ಗುಂಪಿನ ರಕ್ತ ನೀಡಿದ ಬಳಿಕ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂಬುದನ್ನು ತಿಳಿದು ಖುಷಿಯಾಗಿದೆ’ ಎಂದು ರವೀಂದ್ರ ಹೇಳಿದ್ದಾರೆ.

‘ಕಳೆದ 10 ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 8 ಬಾರಿ ರಕ್ತದಾನ ಮಾಡಿರುವೆ. ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಸಹ ರಕ್ತದಾನ ಮಾಡಿ, ರೋಗಿಗಳಿಗೆ ನೆರವಾಗಿದ್ದೇನೆ’ ಎಂದು ಹೇಳಿದ್ದಾರೆ.

‘ಪ್ರಸೂತಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ವೇಳೆ, ಆಕಸ್ಮಿಕವಾಗಿ ‘ಒ’ ಪಾಸಿಟಿವ್‌ ಗುಂಪಿನ ರಕ್ತ ನೀಡಲಾಗಿತ್ತು. ಇದರಿಂದ ಆಕೆಯ ಆರೋಗ್ಯದಲ್ಲಿ ಏರುಪೇರಾಗಿತ್ತಲ್ಲದೇ, ಮೂತ್ರಪಿಂಡಗಳ ಮೇಲೂ ದುಷ್ಪರಿಣಾಮವಾಗಿತ್ತು’ ಎಂದು ಡಾ.ಅಶೋಕ ಯಾದವ್ ತಿಳಿಸಿದ್ದಾರೆ.

‘ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಮಹಿಳೆಯನ್ನು ನಗರದ ರಾಬರ್ಟ್ಸ್‌ ನರ್ಸಿಂಗ್ ಹೋಮ್‌ಗೆ ಸ್ಥಳಾಂತರಿಸಲಾಯಿತು. ಹಿಮೊಗ್ಲೋಬಿನ್‌ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ‘ಬಾಂಬೆ’ ರಕ್ತ ಗುಂಪಿನ ರಕ್ತವನ್ನು ನೀಡಿದ ನಂತರ ಮಹಿಳೆಯ ಆರೋಗ್ಯ ಸುಧಾರಿಸಿದೆ’ ಎಂದು ಹೇಳಿದ್ದಾರೆ.

‘ಒಂದು ವೇಳೆ ಈ ಅಪರೂಪದ ಗುಂಪಿನ ರಕ್ತವನ್ನು ನೀಡದೇ ಹೋಗಿದ್ದಲ್ಲಿ, ಮಹಿಳೆಯ ಜೀವಕ್ಕೆ ಅಪಾಯವಿತ್ತು’ ಎಂದೂ ಡಾ.ಯಾದವ್‌ ಹೇಳಿದ್ದಾರೆ.

ಇಂದೋರ್‌ನ ದಾಮೋದರ ಯುವ ಸಂಘಟನೆ ಎಂಬ ಸಾಮಾಜಿಕ ಸಂಸ್ಥೆಯ ಮುಖ್ಯಸ್ಥ ಅಶೋಕ ನಾಯಕ ಎಂಬುವವರು ಕೂಡ ಎರಡು ಯುನಿಟ್‌ನಷ್ಟು ‘ಬಾಂಬೆ’ ರಕ್ತ ಗುಂಪಿನ ರಕ್ತ ಸಂಗ್ರಹಕ್ಕೆ ವ್ಯವಸ್ಥೆ ಮಾಡಿದ್ದರು.

‘ಈ ಎರಡು ಯುನಿಟ್‌ ರಕ್ತವನ್ನು ನಾಗ್ಪುರದಿಂದ ವಿಮಾನದಲ್ಲಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇಂದೋರ್‌ನಲ್ಲಿದ್ದ ಮಹಿಳೆಯ ಸಹೋದರಿಯೊಬ್ಬರು ಒಂದು ಯುನಿಟ್‌ ರಕ್ತ ದಾನ ಮಾಡಿದರು’ ಎಂದೂ ನಾಯಕ ಹೇಳಿದ್ದಾರೆ.

ಏನಿದು ‘ಬಾಂಬೆ’ ರಕ್ತ ಗುಂಪು 

ಅಪರೂಪದ ‘ಬಾಂಬೆ’ ರಕ್ತ ಗುಂಪನ್ನು 1952ರಲ್ಲಿ ಪತ್ತೆ ಮಾಡಲಾಯಿತು. ಈ ಗುಂಪಿಗೆ ಸೇರಿದ ರಕ್ತದಲ್ಲಿ ‘ಎಚ್‌ ಆ್ಯಂಟಿಜೆನ್’ ಇರುವುದಿಲ್ಲ. ಆದರೆ ‘ಆ್ಯಂಟಿ ಎಚ್‌’ ಪ್ರತಿಕಾಯಗಳು ಇರುತ್ತವೆ. ಹೀಗಾಗಿ ಈ ಗುಂಪಿನ ರಕ್ತ ಹೊಂದಿರುವ ರೋಗಿಗಳಿಗೆ ಅದೇ ಗುಂಪಿನ ರಕ್ತ ನೀಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT