ಇಂಫಾಲ: ಶಸ್ತ್ರಸಜ್ಜಿತ ಉಗ್ರ ಸಂಘಟನೆಗಳ ನಡುವೆ ಕಕ್‌ಚಿಂಗ್ ಜಿಲ್ಲೆಯಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಗುಂಡಿನ ಚಕಮಕಿ ನಡೆಸಿದ ಎರಡೂ ಉಗ್ರ ಸಂಘಟನೆಗಳು ಒಂದೇ ಸಮುದಾಯಕ್ಕೆ ಸೇರಿದವು ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ವಿಷ್ಣುಪುರ ಜಿಲ್ಲೆಯಲ್ಲಿ ನಡೆದಿರುವ ಮತ್ತೊಂದು ಗುಂಡಿನ ದಾಳಿ ಪ್ರಕರಣದ ಬಗ್ಗೆಯೂ ಮಾಹಿತಿ ನಿಡಿದ್ದಾರೆ. ಜಿಲ್ಲೆಯ ಟರ್ಬಂಗ್ ಸಮೀಪ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ಸಿಬ್ಬಂದಿಗಾಗಿ ಪ್ರೀ–ಫ್ಯಾಬ್ರಿಕೇಟೆಡ್ ಮನೆಗಳನ್ನು ಜೋಡಿಸಲು ತೆರಳುತ್ತಿದ್ದ ಕಾರ್ಮಿಕರ ಗುಂಪಿನ ಮೇಲೆ ಶಸ್ತ್ರಧಾರಿಗಳು ಗುರುವಾರ ಗುಂಡು ಹಾರಿಸಿದ್ದಾರೆ.
ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಸುಮಾರು 30 ನಿಮಿಷ ಕಾಳಗ ನಡೆದಿದೆ. ಯಾವುದೇ ಸಾವು–ನೋವು ಸಂಭವಿಸಿಲ್ಲ. ಸ್ಥಳದಲ್ಲಿ ಸದ್ಯ ಸಹಜ ಸ್ಥಿತಿ ಇದೆ ಎಂದು ಸಿಂಗ್ ತಿಳಿಸಿದ್ದಾರೆ.