ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ | ನಾಲ್ವರು ಗ್ರಾಮಸ್ಥರ ಹತ್ಯೆ: ಪ್ರಧಾನಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

Published 2 ಜನವರಿ 2024, 12:37 IST
Last Updated 2 ಜನವರಿ 2024, 12:37 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದ ತೌಬಲ್ ಜಿಲ್ಲೆಯ ಅಲ್ಪಸಂಖ್ಯಾತರ ಪ್ರಾಬಲ್ಯದ ಲಿಲಾಂಗ್ ಚಿಂಗ್‌ಜಾವೊ ಪ್ರದೇಶದಲ್ಲಿ ಸೋಮವಾರ (ಜ.1) ನಾಲ್ವರು ಗ್ರಾಮಸ್ಥರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಣಿಪುರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಇದೆ. 8 ತಿಂಗಳಿಂದ ರಾಜ್ಯದ ಜನರು ಕೊಲೆ, ಹಿಂಸಾಚಾರ ಮತ್ತು ವಿನಾಶವನ್ನು ಎದುರಿಸುತ್ತಿದ್ದಾರೆ. ಈ ಪ್ರವೃತ್ತಿ ಯಾವಾಗ ನಿಲ್ಲುತ್ತದೆ? ಎಂದು ಪ್ರಿಯಾಂಕಾ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮಣಿಪುರದ ಎಲ್ಲಾ ಪಕ್ಷಗಳ ಮುಖಂಡರ ಜಂಟಿ ನಿಯೋಗ ದೆಹಲಿಗೆ ಬಂದು ಪ್ರಧಾನಿಯನ್ನು ಭೇಟಿ ಮಾಡಲು ಸಮಯ ಕೋರಿದೆ. ಆದರೆ ಇಲ್ಲಿಯವರೆಗೆ ಅವರು ಸಮಯ ನೀಡಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.

ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ, ಅಲ್ಲಿನ ಹಿಂಸಾಚಾರದ ಬಗ್ಗೆ ಮಾತನಾಡಿಲ್ಲ. ಸಂಸತ್ತಿನಲ್ಲಿ ಉತ್ತರವನ್ನೂ ನೀಡಿಲ್ಲ. ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಮಣಿಪುರಕ್ಕೆ ಬೇಕಾಗಿರುವುದು ಇಂತಹ ನಾಯಕತ್ವವೇ ಎಂದು ಪ್ರಿಯಾಂಕ ಕಿಡಿಕಾರಿದ್ದಾರೆ.

ಸರ್ಕಾರ ವಿಳಂಬ ಮಾಡದೆ ಮಣಿಪುರದ ಎಲ್ಲಾ ಮಧ್ಯಸ್ಥಗಾರರೊಂದಿಗೆ ಮಾತನಾಡುವ ಮೂಲಕ ರಾಜ್ಯದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಕಾಪಾಡಲು ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

2023ರ ಮೇ 3ರಂದು ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರಕ್ಕೆ ಈವರೆಗೆ ಸುಮಾರು 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT