ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಮರಾಠ ಸಮುದಾಯಕ್ಕೆ ಪೂರ್ಣ ಪ್ರಮಾಣದ ಮೀಸಲಾತಿ ನೀಡುವಂತೆ ಪಟ್ಟು

Published 1 ನವೆಂಬರ್ 2023, 15:59 IST
Last Updated 1 ನವೆಂಬರ್ 2023, 15:59 IST
ಅಕ್ಷರ ಗಾತ್ರ

ಮುಂಬೈ: ಮರಾಠ ಸಮುದಾಯಕ್ಕೆ ಪೂರ್ಣ ಪ್ರಮಾಣದ ಮೀಸಲಾತಿಯನ್ನು ಒದಗಿಸಬೇಕು ಎಂಬ ಪಟ್ಟು ಸಡಿಲಿಸುವುದಿಲ್ಲ ಎಂದಿರುವ ಹೋರಾಟಗಾರ ಮನೋಜ್‌ ಜರಾಂಗೆ–ಪಾಟೀಲ, ಈ ಬೇಡಿಕೆ ಈಡೇರುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಬುಧವಾರ ಹೇಳಿದ್ದಾರೆ.

ಇದರ ಬೆನ್ನಲ್ಲೇ, ಮೀಸಲಾತಿ ವಿಚಾರವಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೋ‌ರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಪ್ರತಿಭಟನಕಾರರು ರಾಜ್ಯದ ವಿವಿಧೆಡೆ ರಸ್ತೆ ತಡೆ ನಡೆಸಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಕೆಲವೆಡೆ ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವದಂತಿಗಳು ಹರಡದಂತೆ ತಡೆಯುವ ಸಲುವಾಗಿ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಬುಧವಾರದಿಂದ ಶುಕ್ರ‌ವಾರ ಸಂಜೆ 6ರ ವರೆಗೆ ಮೊಬೈಲ್‌ ಹಾಗೂ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇನ್ನೊಂದೆಡೆ, ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವ ವಿಷಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯಿತು. ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವಂತೆ ಸಭೆಯು ಜರಾಂಗೆ–ಪಾಟೀಲ ಅವರಿಗೆ ಮನವಿ ಮಾಡಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂದೆ, ‘ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯವು ಸಂಕೀರ್ಣವಾದ ಕಾನೂನು ಮತ್ತು ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಈ ಕುರಿತು ನಿರ್ಧಾರ ಕೈಗೊಳ್ಳಲು ಸಮಯಾವಕಾಶದ ಅಗತ್ಯವಿದೆ’ ಎಂದರು.

‘ಇತರ ವರ್ಗಗಳಿಗೆ ಇರುವ ಮೀಸಲಾತಿಗೆ ಧಕ್ಕೆ ಆಗದಂತೆ ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಸರ್ಕಾರ ಬದ್ಧವಾಗಿದೆ. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬುದಕ್ಕೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ನಾಯಕ ಸಹಮತ ವ್ಯಕ್ತಪಡಿಸಿದ್ದಾರೆ. ಇತರ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನು ಚೌಕಟ್ಟಿನ ಒಳಗೇ ಮೀಸಲಾತಿ ಕಲ್ಪಿಸಬೇಕು ಎಂಬುದಾಗಿ  ನಿರ್ಧರಿಸಲಾಯಿತು’ ಎಂದು ಹೇಳಿದರು.

‘ಯಾವುದೇ ನಿರ್ಧಾರ ಕೈಗೊಂಡರೂ, ಅದು ಕಾನೂನು ಪ್ರಕ್ರಿಯೆ ಪ್ರಕಾರವೇ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಗಳ ಮೇಲೆ ವಿಶ್ವಾಸ ಇಡಬೇಕು’ ಎಂದ ಶಿಂದೆ, ‘ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಪರಿಹಾರಾತ್ಮಕ ಮೇಲ್ಮನವಿಗೆ ಸಂಬಂಧಿಸಿ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ’  ಎಂದರು.

ಜಲ್ನಾ ಜಿಲ್ಲೆಯ ಅಂಬಡ ತಾಲ್ಲೂಕಿನ ಅಂತರವಾಲಿ–ಸರಾಟಿ ಗ್ರಾಮದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಮನೋಜ್‌ ಜರಾಂಗೆ–ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವ ಕಾರಣಕ್ಕೆ ಸರ್ಕಾರ ಸಮಯಾವಕಾಶ ಕೇಳುತ್ತಿದೆ’ ಎಂದು ಪ್ರಶ್ನಿಸಿದರು.

‘ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸಿ ಎಂಟು ದಿನಗಳು ಕಳೆದಿವೆ. ಈ ಕುರಿತು ನಿರ್ಣಯ ಕೈಗೊಳ್ಳಲು ಸಮಯ ಬೇಕು ಎಂದು ಸರ್ಕಾರ ಈಗ ಹೇಳುತ್ತಿದೆ. ಯಾಕೆ ಮತ್ತು ಯಾವುದಕ್ಕಾಗಿ ಸಮಯ ಬೇಕು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಹೇಳಿದರು.

‘ಮರಾಠ ಸಮುದಾಯಕ್ಕೆ ಅರ್ಧಂಬರ್ಧ ಮೀಸಲಾತಿ ಬೇಕಿಲ್ಲ. ಕೊಡುವುದಾದರೆ ಪೂರ್ಣ ಪ್ರಮಾಣದ ಮೀಸಲಾತಿ ನೀಡಿ’ ಎಂದೂ ಪುನರುಚ್ಚರಿಸಿದರು.

ಹೋರಾಟ: ಪ್ರಮುಖ ಅಂಶಗಳು

  • ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 141 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಜಿಪಿ ರಜನೀಶ್ ಸೇಠ್ ಹೇಳಿದ್ದಾರೆ.

  • ಮರಾಠ ಕ್ರಾಂತಿ ಮೋರ್ಚಾ ಹಾಗೂ ಸಕಾಳ ಮರಾಠ ಮೋರ್ಚಾ ಸಂಘಟನೆಗಳ 400ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  • ದುಷ್ಕರ್ಮಿಗಳು ₹ 12 ಕೋಟಿ ಮೌಲ್ಯದ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಠಾಣೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರನ್ನು ಭೇಟಿಯಾಗಲು ತೆರಳಿದ್ದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರಿಗೆ ವೇದಿಕೆಯಿಂದ ಕೆಳಗಿಳಿಯುವಂತೆ ಪ್ರತಿಭಟನಕಾರರು ಹೇಳಿದ ಘಟನೆ ನಡೆದಿದೆ. ಪ್ರತಿಭಟನಕಾರರ ಆಕ್ರೋಶಕ್ಕೆ ಮಣಿದು ಅವ್ಹಾದ ಅವರು ವೇದಿಕೆಯಿಂದ ನಿರ್ಗಮಿಸಿದ್ದಾರೆ

  • ನಾಗ್ಪುರದಲ್ಲಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ 

  • ಮರಾಠ ಮೀಸಲಾತಿ ವಿಷಯ ಕುರಿತು ಚರ್ಚಿಸುವುದಕ್ಕಾಗಿ ಸಂಸತ್‌ನ ವಿಶೇಷ ಅಧಿವೇಶನ ಕರೆಯುವಂತೆ ಶಿವಸೇನಾ (ಯುಬಿಟಿ) ಸಂಸದ ವಿನಾಯಕ ರಾವುತ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT