ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭವನದ ಭದ್ರತಾ ವೈಫಲ್ಯ: ಮಾಸ್ಟರ್ ಮೈಂಡ್ ಲಲಿತ್ ಝಾ ಬಂಧನ

ನಾಲ್ವರು 7 ದಿನ ಪೊಲೀಸ್‌ ವಶಕ್ಕೆ
Published 14 ಡಿಸೆಂಬರ್ 2023, 18:09 IST
Last Updated 14 ಡಿಸೆಂಬರ್ 2023, 18:09 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಭವನದಲ್ಲಿ ನಡೆದಿದ್ದ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಲಲಿತ್ ಝಾ ದೆಹಲಿ ಪೊಲೀಸರಿಗೆ ಶರಣಾಗಿದ್ದಾನೆ.

ದೆಹಲಿ ಪೊಲೀಸ್‌ನ ವಿಶೇಷ ಘಟಕದ ಮುಂದೆ ಇಂದು ರಾತ್ರಿ ಶರಣಾಗಿರುವ ಲಲಿತ್ ಕೋಲ್ಕತ್ತ ಮೂಲದವನು ಎನ್ನಲಾಗಿದೆ.

ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಲೋಕಸಭೆಯಲ್ಲಿ ಹಾಗೂ ಸಂಸತ್ ಭವನದ ಹೊರಗಡೆ ಸ್ಮೋಕ್ ಕ್ಯಾನ್‌ (ಅನಿಲ ಉಗುಳುವ ಡಬ್ಬಿ) ಪ್ರಯೋಗಿಸಿದ್ದ ನಾಲ್ವರು ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದ ಆರೋಪದಡಿ ಇಬ್ಬರನ್ನು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.

ಇದೀಗ ಲಲಿತ್ ಝಾ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

ಡಿ. ಮನೋರಂಜನ್, ಸಾಗರ್ ಶರ್ಮ, ಅಮೋಲ್ ಶಿಂದೆ ಮತ್ತು ನೀಲಂ ದೇವಿ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಹರದೀಪ್ ಕೌರ್ ಅವರ ಎದುರು ಗುರುವಾರ ದೆಹಲಿ ಪೊಲೀಸರು ಹಾಜರುಪಡಿಸಿದರು.

ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲು

ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಲೋಕಸಭೆ ಹಾಗೂ ಸಂಸತ್ ಭವನದ ಹೊರಗಡೆ ಸ್ಮೋಕ್ ಕ್ಯಾನ್‌ (ಅನಿಲ ಉಗುಳುವ ಡಬ್ಬಿ) ಪ್ರಯೋಗಿಸಿದ್ದ ನಾಲ್ಕು ಮಂದಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಿದೆ.

ಡಿ.ಮನೋರಂಜನ್, ಸಾಗರ್ ಶರ್ಮ, ಅಮೋಲ್ ಶಿಂದೆ ಮತ್ತು ನೀಲಂ ದೇವಿ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಹರದೀಪ್ ಕೌರ್ ಅವರ ಎದುರು ದೆಹಲಿ ಪೊಲೀಸರು ಗುರುವಾರ ಹಾಜರು ಪಡಿಸಿದರು.

ಬಂಧಿತರನ್ನು 15 ದಿನಗಳ ಅವಧಿಗೆ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಕೋರಿದರು. ಆದರೆ ಕೋರ್ಟ್‌ ಏಳು ದಿನಗಳ ಅವಧಿಗೆ ಮಾತ್ರ ಪೊಲೀಸ್ ವಶಕ್ಕೆ ನೀಡಿದೆ. ಸಂಸತ್ತಿನ ಭದ್ರತೆಯ ಉಲ್ಲಂಘನೆಯು ‘ಭಯೋತ್ಪಾದನಾ ಕ್ರಮ’ ಮತ್ತು ಭೀತಿ ಮೂಡಿಸಲು ಮಾಡಿದ ‘ಯೋಜಿತ’ ದಾಳಿ ಎಂದು ದೆಹಲಿ ಪೊಲೀಸರು ಹೇಳಿದರು. 

ಈ ಮಧ್ಯೆ, ದಾಳಿ ಪ್ರಕರಣದ ‘ಪ್ರಮುಖ ರೂವಾರಿ’ ಎನ್ನಲಾಗಿರುವ, ಕೋಲ್ಕತ್ತ ಮೂಲದ ಶಿಕ್ಷಕ ಲಲಿತ್‌ ಝಾ ಎನ್ನುವವರನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದರು. ಈತನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಸಂಸತ್ ಭವನಕ್ಕೆ  500 ಮೀಟರ್‌ ದೂರದಲ್ಲಿರುವ ಕರ್ತವ್ಯ ಪಥ ಠಾಣೆಗೆ ಗುರುವಾರ ರಾತ್ರಿ ಬಂದ ಝಾನನ್ನು  ಪೊಲೀಸರು ಬಂಧಿಸಿದರು.

ಇವರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ ಪೊಲೀಸರು ಬಳಿಕ, ಈತನನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಘಟಕದ ವಶಕ್ಕೆ ಒಪ್ಪಿಸಿದರು. ಈತನ ಬಂಧನದೊಂದಿಗೆ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ.

‘ಯುಎಪಿಎ ಅಡಿ ದಾಖಲಿಸುವ ಪ್ರಕರಣಗಳು ಜಾಮೀನುರಹಿತವಾಗಿರುತ್ತವೆ. ಈ ಘಟನೆಗೂ ಯಾವುದೇ ಭಯೋತ್ಪಾದಕ ಸಂಘಟನೆಗೂ ನಂಟು ಇದುವರೆಗೆ ಕಂಡುಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಇನ್ನೂ ಇಬ್ಬರ ಹೆಸರು ಪ್ರಸ್ತಾಪ ಆಗಿದೆ, ಎಲ್ಲವನ್ನೂ ವ್ಯವಸ್ಥಿತವಾಗಿ ಯೋಜಿಸಿ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ಹೇಳಿವೆ. ಆರೋಪಿಗಳು ಸಂಸತ್ತಿಗೆ ಬರುವುದಕ್ಕೂ ಮೊದಲು ಗುರುಗ್ರಾಮದಲ್ಲಿ ವಿಶಾಲ್ ಶರ್ಮ ಅಲಿಯಾಸ್ ವಿಕ್ಕಿ ಎನ್ನುವವರ ಮನೆಯಲ್ಲಿ ಇದ್ದರು. ವಿಶಾಲ್ ಅವರು ಈಗಲೂ ಪೊಲೀಸರ ವಶದಲ್ಲಿದ್ದಾರೆ.

ನಾಲ್ವರು ಆರೋಪಿಗಳ ವೈದ್ಯಕೀಯ ತಪಾಸಣೆಯನ್ನು ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆಸಲಾಯಿತು. ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ), ಸೆಕ್ಷನ್ 18 (ಪಿತೂರಿಗೆ ಶಿಕ್ಷೆ) ಮತ್ತು ಐಪಿಸಿಯ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 452 (ಅಕ್ರಮ ಪ್ರವೇಶ), ಸೆಕ್ಷನ್ 153 (ದಂಗೆಗೆ ಪ್ರಚೋದನೆ ನೀಡುವುದು), ಸೆಕ್ಷನ್ 186 (ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡುವುದು) ಸೇರಿ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಆರೋಪಿಗಳನ್ನು ರಾಜತಾಂತ್ರಿಕ ಭದ್ರತಾ ಪಡೆಯ ಕಚೇರಿಯಲ್ಲಿ ವಿಚಾರಣೆಗೆ ಗುರಿಪಡಿಸಲಾಯಿತು. ಆರಂಭದಲ್ಲಿ ನೀಲಂ, ಅಮೋಲ್ ಅವರನ್ನು ಸಂಸತ್ ಬೀದಿಯ ಠಾಣೆಗೆ ಕರೆದೊಯ್ಯಲಾಗಿತ್ತು. ತನಿಖೆ ಸಂದರ್ಭದಲ್ಲಿ ಎರಡು ಸಂಘಟನೆಗಳ ಹೆಸರು ಪ್ರಸ್ತಾಪ ಆಗಿದೆ, ಅವುಗಳ ಪಾತ್ರದ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿಗಳೆಲ್ಲರೂ ಒಂದೇ ರೀತಿ ಉತ್ತರ ನೀಡುತ್ತಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದು, ತನಿಖೆ ಎದುರಿಸಬೇಕಾಗಿ ಬಂದರೆ ಯಾವ ಉತ್ತರ ನೀಡಬೇಕು ಎನ್ನುವ ವಿಚಾರದಲ್ಲಿ ಅವರೆಲ್ಲರು ಸಿದ್ಧತೆ ನಡೆಸಿದ್ದರು ಅನ್ನಿಸುತ್ತದೆ ಎಂದು ಮೂಲಗಳು ಹೇಳಿವೆ.

ಭಗತ್‌ಸಿಂಗ್‌ ಪ್ರೇರಣೆ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ ಅವರಿಂದ ಪ್ರೇರಣೆ ಪಡೆದು ಲಲಿತ್ ಹಾಗೂ ಇತರರು, ದೇಶದ ಗಮನ ಸೆಳೆಯುವಂತಹ ಕೃತ್ಯ ಎಸಗಲು ಮುಂದಾದರು ಎನ್ನಲಾಗಿದೆ. ಆರು ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತರಾಗಿದ್ದು, ಫೇಸ್‌ಬುಕ್‌ನಲ್ಲಿ ಭಗತ್ ಸಿಂಗ್‌ ಅಭಿಮಾನಿಗಳ ಪುಟ ಸೇರಿದ್ದರು ಎಂದು ಗೊತ್ತಾಗಿದೆ.

ತನಿಖೆಯ ಸಂದರ್ಭದಲ್ಲಿ ಅಮೋಲ್ ಅವರು, ರೈತರ ಪ್ರತಿಭಟನೆ, ಮಣಿಪುರದಲ್ಲಿ ನಡೆದಿದ್ದ ಜನಾಂಗೀಯ ಘರ್ಷಣೆ ಹಾಗೂ ನಿರುದ್ಯೋಗ ಸಮಸ್ಯೆಗಳಿಂದ ನಾವು ತೀವ್ರ ಬೇಸರಗೊಂಡಿದ್ದಾಗಿ ತಿಳಿಸಿದ್ದಾರೆ. ಇವರೆಲ್ಲರ ಸಿದ್ಧಾಂತ ಒಂದೇ ಆಗಿತ್ತು. ಹೀಗಾಗಿ ಎಲ್ಲರೂ ಸೇರಿ ಸರ್ಕಾರಕ್ಕೆ ಒಂದು ಸಂದೇಶ ನೀಡಲು ಬಯಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT