ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶೀಲನೆ: ಮಾಧ್ಯಮ ಸಂಘಟನೆಗಳ ಆಕ್ರೋಶ

ಭಾರತೀಯ ಸಂಪಾದಕರ ಕೂಟ, ಪ್ರೆಸ್‌ ಕ್ಲಬ್‌ ಆಫ್ ಇಂಡಿಯಾ, ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌ ಕಳವಳ
Last Updated 14 ಫೆಬ್ರುವರಿ 2023, 18:18 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಸಂಸ್ಥೆಯ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಿದ್ದನ್ನು ಮಾಧ್ಯಮ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಭಾರತೀಯ ಸಂಪಾದಕರ ಕೂಟ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಆಡಳಿತಾರೂಢ ಸರ್ಕಾರಗಳನ್ನು ಟೀಕಿಸುವ ಮಾಧ್ಯಮಗಳನ್ನು ಸರ್ಕಾರಿ ತನಿಖಾ ಸಂಸ್ಥೆಗಳ ಮೂಲಕ ಬೆದರಿಸುವ ಹಾಗೂ ಹಿಂಸಿಸುವ ಪ್ರವೃತ್ತಿಯ ಮುಂದು
ವರಿದ ಭಾಗವಿದು’ ಎಂದು ಕರೆದಿದೆ.

2021ರ ಸೆಪ್ಟೆಂಬರ್‌ನಲ್ಲಿ ನ್ಯೂಸ್‌ಕ್ಲಿಕ್, ನ್ಯೂಸ್‌ಲಾಂಡ್ರಿ ಮೇಲೆ ಮತ್ತು 2021ರ ಜೂನ್‌ನಲ್ಲಿ ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ವಿರುದ್ಧ ಇಂಹತದ್ದೇ ಕ್ರಮ ತೆಗೆದುಕೊಳ್ಳಲಾಗಿತ್ತು. 2021ರ ಫೆಬ್ರುವರಿಯಲ್ಲಿ ನ್ಯೂಸ್‌ಕ್ಲಿಕ್ ಕಚೇರಿಯಲ್ಲಿ ಇ.ಡಿ ಮೂಲಕ ಶೋಧನೆ ನಡೆಸಲಾಗಿತ್ತು ಎಂದು ಸಂಪಾದಕರ ಕೂಟ ಹೇಳಿದೆ. ಇಂತಹ ಎಲ್ಲ ತನಿಖೆಗಳ ಸಂದರ್ಭದಲ್ಲಿ ಸಂವೇದನಾಶೀಲತೆಯನ್ನು ಕಾಯ್ದುಕೊಳ್ಳಬೇಕು ಹಾಗೂ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆ ಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಕೇಂದ್ರ ಸರ್ಕಾರದ ನಡೆಯನ್ನು ಪ್ರೆಸ್‌ಕ್ಲಬ್‌ ಆಫ್ ಇಂಡಿಯಾ ಖಂಡಿಸಿದೆ. ಈ ಘಟನೆಯು, ಸರ್ಕಾರದ ಸಂಸ್ಥೆಗಳಿಂದ ಮಾಧ್ಯಮಗಳ ಮೇಲೆ ನಡೆಯುತ್ತಿರುವ ದಾಳಿಯ ಭಾಗ ಎಂದು ಕರೆದಿದೆ. ಮಾಧ್ಯಮಗಳನ್ನು ಬೆದರಿಸುವ ಇಂತಹ ಯತ್ನಗಳಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ.

ಈ ವಿದ್ಯಮಾನವನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಗೂ ಅಪಮಾನ ಎಂದು ‘ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌’ (ಸಿಪಿಜೆ) ಎಂಬ ಅಂತರರಾಷ್ಟ್ರೀಯ ಸಂಸ್ಥೆ ಕರೆದಿದೆ. ಪತ್ರಕರ್ತರ ಮೇಲಿನ ದೌರ್ಜನ್ಯವನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಆರ್‌. ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರೂ ಖಂಡಿಸಿದ್ದಾರೆ.

ಬೆದರಿಕೆ ನೀತಿಗೆ ಪ್ರತಿಪಕ್ಷಗಳ ಖಂಡನೆ

ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯನ್ನು ಪ್ರತಿಪಕ್ಷಗಳು ಒಕ್ಕೊರಲಿನಿಂದ ಖಂಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ್ದಕ್ಕೆ ಕೇಂದ್ರ ಸರ್ಕಾರವು ಬಿಬಿಸಿಯನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದು, ಸುದ್ದಿಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದ ನಡೆಯು ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. ‘ಟೀಕೆಗಳಿಗೆ ಮೋದಿ ಸರ್ಕಾರ ಹೆದರುತ್ತದೆ ಎಂಬುದನ್ನು ಬಿಬಿಸಿ ವಿರುದ್ಧ ತೆಗೆದುಕೊಂಡಿರುವ ಈ ಕ್ರಮವು ತೋರಿಸುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

‘ಇದು ಸೈದ್ಧಾಂತಿಕ ತುರ್ತು ಪರಿಸ್ಥಿತಿಯ ಆರಂಭ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ‘ದಬ್ಬಾಳಿಕೆ ನಡೆಸುತ್ತಿರುವುದನ್ನು ನೋಡಿದರೆ, ಅಂತ್ಯ ಹತ್ತಿರ ಬಂದಿದೆ ಎಂದು ಯಾರಿಗಾದರೂ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.

ಎಡಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. ‘ಜಿ–20 ದೇಶಗಳ ನಾಯಕರು ಬಂದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಸಿದರೆ ಮೋದಿ ಸತ್ಯವನ್ನು ಹೇಳುತ್ತಾರೆಯೇ?’ ಎಂದು ಸಿಪಿಎಂ ಸಂಸದ ಬಿನೋಯ್ ವಿಶ್ವಂ ಪ್ರಶ್ನಿಸಿದ್ದಾರೆ. ‘ಪ್ರತಿಪಕ್ಷಗಳು, ಮಾಧ್ಯಮಗಳು, ಕಾರ್ಯಕರ್ತರು ಯಾರೇ ಆಗಿರಲಿ, ಸತ್ಯ ಹೇಳುವವರನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಅದಾನಿ ಸಮೂಹದ ಮೇಲೆ ತನಿಖೆ ಏಕಿಲ್ಲ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಸಮರ್ಥನೆ

ಬಿಬಿಸಿ ಕಚೇರಿಯಲ್ಲಿ ಪರಿಶೀಲನೆ ವಿಚಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ತನಿಖಾ ಸಂಸ್ಥೆಗಳಿಗೆ ಅವುಗಳ ಕೆಲಸ ಮಾಡಲು ಬಿಡಬೇಕು ಎಂದು ಬಿಜೆಪಿ ಮುಖಂಡ ಗೌರವ್ ಭಾಟಿಯಾ ಹೇಳಿದ್ದಾರೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ನಡೆದ ಪರಿಶೀಲನೆಯ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯು ಹಂಚಿಕೊಳ್ಳಲಿದೆ ಎಂದಿದ್ದಾರೆ. ಅವ್ಯವಹಾರಗಳು ನಡೆದಿವೆ ಎಂದು ಗೊತ್ತಾದಾಗ, ತೆರಿಗೆ ಇಲಾಖೆಯು ಆಗಾಗ್ಗೆ ಪರಿಶೀಲನೆ ನಡೆಸುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT