ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಧಿವೇಶನಕ್ಕೆ ಮುನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್‌ನ ಸಭೆ

Published 3 ಜುಲೈ 2023, 20:57 IST
Last Updated 3 ಜುಲೈ 2023, 20:57 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್‌ನ ಸಭೆ ಇಲ್ಲಿನ ಪ್ರಗತಿ ಮೈದಾನದ ನೂತನ ಸಮಾವೇಶ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಸಭೆಯ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ, ‘ಮಂತ್ರಿಗಳ ಜತೆಗೆ ಫಲಪ್ರದ ಸಭೆ ನಡೆಸಲಾಗಿದೆ. ಅಲ್ಲಿ ನಾವು ವೈವಿಧ್ಯಮಯ ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿ ಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ. 

‘ಬಿಜೆಪಿ ಸರ್ಕಾರವು 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಲೋಕಸಭಾ ಚುನಾವಣೆಗೆ ಇನ್ನು 9 ತಿಂಗಳಷ್ಟೇ ಉಳಿದಿದೆ. ಈ ಅವಧಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವ ಕೆಲಸ ಮಾಡಿ’ ಎಂದು ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಗೆ ಮುನ್ನ ಸಚಿವ ಸಂಪುಟ ಹಾಗೂ ಪಕ್ಷದ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಕಮಲ ಪಾಳಯ ಉತ್ಸುಕವಾಗಿದೆ. ಮುಂಗಾರು
ಅಧಿವೇಶನದಲ್ಲಿ ವಿಪಕ್ಷಗಳ ಆರೋಪಗಳಿಗೆ ತಕ್ಕ ತಿರುಗೇಟು ನೀಡಲು ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿವೆ. 

ಕೇಂದ್ರದ ಕೆಲವು ಪ್ರಮುಖ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಸಚಿವರು ಯೋಜನೆಗಳ ಪ್ರಗತಿಯ ವರದಿ ಸಲ್ಲಿಸಿದರು. ಲೋಕಸಭಾ ಚುನಾವಣೆಗೆ ಮುನ್ನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಪ್ರಧಾನಿ ಅವರು ಸಚಿವರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.‍ಪಿ. ನಡ್ಡಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಹಾಗೂ ಇತರರ ನಾಯಕರೊಂದಿಗೆ ಮೋದಿ ಕಳೆದ ವಾರ ಸುದೀರ್ಘ ಸಭೆ ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಸಂಪುಟ ಪುನರ್‌ ರಚನೆ ಕುರಿತು ಈ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT