ನವದೆಹಲಿ: ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗ (ಒಬಿಸಿ) ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ (ಇಡಬ್ಲ್ಯುಎಸ್) ಅಭ್ಯರ್ಥಿಗಳು ಪಡೆದಿರುವ ಅಂಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗದಿ ಮಾಡಿರುವ ಅಂಕಗಳಿಗಿಂತ ಹೆಚ್ಚಿದ್ದರೆ, ಅವರನ್ನು ‘ಸಮತಲ ಕೋಟಾ ಸೀಟು’ಗಳಿಗೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಸ್‌ಸಿ, ಒಬಿಸಿ ಮತ್ತು ಇಡಬ್ಲ್ಯುಎಸ್ ವರ್ಗಗಳಿಗೆ ಸೇರಿದ ಏಳು ಮಂದಿಗೆ ಎಂಬಿಬಿಎಸ್ ಕೋರ್ಸ್‌ನ ‘ಮೀಸಲಾಗಿಲ್ಲದ ಸರ್ಕಾರಿ ಶಾಲೆಗಳ ಕೋಟಾ’ (ಯುಆರ್–ಜಿಎಸ್) ಅಡಿ 2024–25ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
‘ಪ್ರತಿವಾದಿಗಳು ಸಮತಲ ಮೀಸಲಾತಿಯಲ್ಲಿ ಬೇರೆ ಬೇರೆ ವರ್ಗಗಳನ್ನು ಪ್ರತ್ಯೇಕಿಸಲು ಅನುಸರಿಸಿದ ವಿಧಾನ ಹಾಗೂ ಮೀಸಲು ವರ್ಗದ ಪ್ರತಿಭಾವಂತ ಅಭ್ಯರ್ಥಿಗಳು ಮೀಸಲು ಇಲ್ಲದ ಸೀಟುಗಳತ್ತ ಸಾಗದಂತೆ ಮಾಡಿರುವುದು ಸ್ವಲ್ಪವೂ ಸಮರ್ಥನೀಯವಲ್ಲ’ ಎಂದು ವಿಭಾಗೀಯ ಪೀಠವು ಹೇಳಿದೆ.
ತಮಗಿಂತ ಕಡಿಮೆ ಪ್ರತಿಭಾನ್ವಿತರು, ತಮಗಿಂತ ಕಡಿಮೆ ಅಂಕ ಪಡೆದವರು ಯುಆರ್–ಜಿಎಸ್ ಸೀಟುಗಳ ಅಡಿ ಪ್ರವೇಶ ಪಡೆದುಕೊಂಡಿದ್ದಾರೆ; ಆದರೆ, ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಮೇಲ್ಮನವಿದಾರರು ಅಳಲು ತೋಡಿಕೊಂಡಿದ್ದರು.
ನೀತಿಯನ್ನು ತಪ್ಪಾಗಿ ಅನ್ವಯ ಮಾಡಿದ ಕಾರಣದಿಂದಾಗಿ ಜಿಎಸ್ ಕೋಟಾ ಅಡಿ ಯುಆರ್–ಜಿಎಸ್ ಎಂದು ವರ್ಗೀಕರಿಸಲಾದ 77 ಸೀಟುಗಳು ಭರ್ತಿಯಾಗದೆ ಉಳಿದವು. ನಂತರ ಇವುಗಳನ್ನು ಎಲ್ಲರಿಗೂ ಮುಕ್ತವಾದ ವಿಭಾಗಕ್ಕೆ ವರ್ಗಾಯಿಸಬೇಕಾಯಿತು.
ಸೌರವ್ ಯಾದವ್ ಹಾಗೂ ಇತರರು ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಆಧಾರವಾಗಿ ಇರಿಸಿಕೊಂಡ ಮೇಲ್ಮನವಿದಾರರು, ‘ಸಮತಲ ಮೀಸಲಾತಿಯಲ್ಲಿಯೂ, ಮೀಸಲಾತಿಯ ಸೌಲಭ್ಯ ಇರುವ ವರ್ಗಗಳಾದ ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳು ತಮ್ಮ ಪ್ರತಿಭೆಯ ಕಾರಣಕ್ಕೆ ಜಿಎಸ್ ಕೋಟಾ ಪಡೆಯಲು ಅರ್ಹರಾಗಿದ್ದರೆ, ಅವರಿಗೆ ಆ ಕೋಟಾ ಅಡಿ (ಯುಆರ್ ಸೀಟುಗಳು) ಪ್ರವೇಶ ನೀಡಬೇಕು’ ಎಂದು ವಾದಿಸಿದ್ದರು.
ಮೀಸಲಾತಿಯ ಪ್ರಯೋಜನಗಳು ಇರುವ ವರ್ಗಗಳಿಗೆ ಸೇರಿದ, ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಮೀಸಲಾತಿ ಇಲ್ಲದ ಸರ್ಕಾರಿ ಶಾಲೆಗಳ ಕೋಟಾ’ ಅಡಿ ಎಂಬಿಬಿಎಸ್ ಸೀಟುಗಳನ್ನು ನೀಡಬೇಕು. ಅವರಿಗೆ ಈ ಸೀಟುಗಳನ್ನು ನೀಡಿದ ನಂತರವಷ್ಟೇ ಅವುಗಳನ್ನು ಇತರರಿಗೆ ಮುಕ್ತವಾಗಿಸಬಹುದು ಎಂದು ಕೂಡ ಅವರು ವಾದಿಸಿದ್ದರು.
ಆದರೆ, ಲಂಬ ಮೀಸಲಾತಿಯ ವರ್ಗಗಳಾದ ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್‌ಗಳನ್ನು ಸಮತಲ ಮೀಸಲಾತಿಯಾದ ಯುಆರ್–ಜಿಎಸ್‌ಗೆ ವರ್ಗಾಯಿಸಲು ಅವಕಾಶ ಇಲ್ಲ ಎಂದು ಮಧ್ಯಪ್ರದೇಶ ಸರ್ಕಾರ ವಾದಿಸಿತ್ತು.
ಲಂಬ ಮೀಸಲಾತಿಯ ಪ್ರಯೋಜನ ಇರುವ ಯಾವುದೇ ವರ್ಗದ ಅಭ್ಯರ್ಥಿಯು ತನ್ನ ಪ್ರತಿಭೆಯ ಕಾರಣದಿಂದಾಗಿ ಮುಕ್ತ ಅಥವಾ ಸಾಮಾನ್ಯ ವರ್ಗದ ಅಡಿಯಲ್ಲಿ ಆಯ್ಕೆಯಾಗಲು ಅರ್ಹನಾಗಿದ್ದರೆ, ಆ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಆಯ್ಕೆಮಾಡಬೇಕು; ಅಂತಹ ಆಯ್ಕೆಯನ್ನು ಲಂಬ ಮೀಸಲಾತಿಯ ವರ್ಗಗಳಿಗೆ ಸಿಗುವ ಮೀಸಲಾತಿ ಸೌಲಭ್ಯದ ಅಡಿಯಲ್ಲಿ ಪರಿಗಣಿಸಬಾರದು ಎಂಬುದು ಒಪ್ಪಿತವಾಗಿರುವ, ಇತ್ಯರ್ಥವಾಗಿರುವ ಸಂಗತಿ ಎಂದು ಪೀಠವು ಸ್ಪಷ್ಟಪಡಿಸಿತು.
‘ಈ ತತ್ವವು ಸಮತಲ ಮೀಸಲಾತಿಗೂ ಅನ್ವಯವಾಗುತ್ತದೆ’ ಎಂದು ಅದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.