ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಹಿತ ‘ಗಗನಯಾನ’ಕ್ಕೆ ಮೊದಲ ಪರೀಕ್ಷಾ ಉಡಾವಣೆ ಇಂದು

Published 16 ಅಕ್ಟೋಬರ್ 2023, 15:57 IST
Last Updated 16 ಅಕ್ಟೋಬರ್ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷೆಗಳ ಪೈಕಿ ಮೊದಲ ಪರೀಕ್ಷಾ ಉಡಾವಣೆ ಶನಿವಾರ ಬೆಳಿಗ್ಗೆ ಶ್ರೀಹರಿಕೋಟದಿಂದ ನಡೆಯಲಿದೆ.

ಒಟ್ಟು ಪರೀಕ್ಷೆಯ ಅವಧಿ ಕೇವಲ 9 ನಿಮಿಷಗಳು. ರಾಕೆಟ್‌ ಉಡಾವಣೆಗೊಂಡು 9 ನಿಮಿಷಗಳಲ್ಲಿ 17 ಕಿ.ಮೀ ಎತ್ತರಕ್ಕೆ ತಲುಪಿ ‘ಕ್ರೂ ಮಾಡ್ಯೂಲ್‌’ (ಗಗನಯಾನಿಗಳ ಪಯಣಿಸುವ ಕೋಶ) ಪ್ರತ್ಯೇಕಗೊಂಡು ಬಂಗಾಳ ಕೊಲ್ಲಿಗೆ ಬಂದು ಇಳಿಯಲಿದೆ ಎಂದು ಇಸ್ರೊ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಪರೀಕ್ಷೆ ಯಾವ ಕಾರಣಕ್ಕೆ?

ಗಗನಯಾನದ ರಾಕೆಟ್‌ ಬಾಹ್ಯಾಕಾಶಕ್ಕೆ ಯಾನ ಮಾಡುವ ಸಂದರ್ಭದಲ್ಲಿ ಅವಘಡಕ್ಕೆ ತುತ್ತಾದರೆ, ಗಗನಯಾನಿಗಳು ಅಲ್ಲಿಂದ ಪಾರಾಗುವುದು ಹೇಗೆ ಎಂಬ ಪ್ರಾತ್ಯಕ್ಷಿಕೆ ಪರೀಕ್ಷೆ ನಡೆಯುತ್ತದೆ.

ರಾಕೆಟ್‌ ಉಡಾವಣೆಗೊಂಡು ಬಾಹ್ಯಾಕಾಶದಲ್ಲಿ ಸಾಗುವಾಗ ರಾಕೆಟ್‌ನಲ್ಲಿ ದೋಷ ಉಂಟಾಗಿ ಸ್ಫೋಟ ಆಗುವ ಸಾಧ್ಯತೆ ಇರುತ್ತದೆ. ಆಗ ‘ಕ್ರೂ ಮಾಡ್ಯೂಲ್‌’ ಅನ್ನು ಮೂಲ ರಾಕೆಟ್‌ನಿಂದ ಸೆಳೆದು ದೂರಕ್ಕೆ ಒಯ್ದು ಪಾರು ಮಾಡಲು ಮತ್ತೊಂದು ರಾಕೆಟ್‌ ಅಳವಡಿಸಲಾಗಿರುತ್ತದೆ. ಆ ರಾಕೆಟ್‌ ಕ್ರೂ ಮಾಡ್ಯೂಲ್‌ ಅನ್ನು ಸೆಳೆದು ಸಾಕಷ್ಟು ಮೇಲಕ್ಕೆ ಒಯ್ಯುತ್ತದೆ ಎಂದು ಇಸ್ರೊ ವಿಜ್ಞಾನಿಯೊಬ್ಬರು ತಿಳಿಸಿದರು.

ಶನಿವಾರ ಬೆಳಿಗ್ಗೆ ಉಡಾವಣೆಗೆ ಕಮಾಂಡ್‌ ನೀಡಿದ 6 ಸೆಕೆಂಡ್‌ಗಳಲ್ಲಿ ಉಡಾವಣಾ ವೇದಿಕೆಯಲ್ಲಿ ಜಿಗಿಯಲು ಸ್ಥಿರತೆ ಕಾಯ್ದುಕೊಂಡು, ನಂತರ ಮೇಲಕ್ಕೆ ಜಿಗಿಯುತ್ತದೆ. 61 ಸೆಕೆಂಡ್‌ಗಳಲ್ಲಿ 12 ಕಿ.ಮೀ ಕ್ರಮಿಸುತ್ತದೆ. ಆಗ ಕ್ರೂ ಮಾಡ್ಯೂಲ್‌ ಮೇಲಿರುವ ಮತ್ತೊಂದು ರಾಕೆಟ್‌ ಕ್ರೂ ಮಾಡ್ಯುಲ್‌ ಅನ್ನು ಅತ್ಯಂತ ವೇಗದಲ್ಲಿ ಮೂಲ ರಾಕೆಟ್‌ನಿಂದ (ಪಿಎಸ್‌ಎಲ್‌ವಿ) ಬೇರ್ಪಡಿಸಿ ಮೇಲಕ್ಕೆ ಸೆಳೆದು ಒಯ್ಯುತ್ತದೆ. ಅಂದರೆ 17 ನೇ ಕಿ.ಮೀ.ಗೆ ಒಯ್ಯುತದೆ. ಅಲ್ಲಿಂದ ಕ್ರೂ ಮಾಡ್ಯೂಲ್‌ ಬೀಳಲಾರಂಭಿಸುತ್ತದೆ. ಆಗ ಅದಕ್ಕೆ ಅಳವಡಿಸಿರುವ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತವೆ ಎಂದು ವಿವರಿಸಿದರು.

ಪ್ಯಾರಾಚೂಟ್‌ಗಳು ಸುರಕ್ಷಿತವಾಗಿ ಕ್ರೂ ಮಾಡ್ಯೂಲ್ ಅನ್ನು ಬಂಗಾಳಕೊಲ್ಲಿಯ ನೀರಿನ ಮೇಲಿಳಿಸುತ್ತವೆ. ಇದೊಂದು ಮಹತ್ವದ ಪರೀಕ್ಷೆ. ಒಟ್ಟು 9 ನಿಮಿಷಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯುತ್ತದೆ. ಮಾನವ ಸಹಿತ ಗಗನಯಾನದಲ್ಲಿ ಗಗನಯಾನಿಗಳ ಸುರಕ್ಷತೆ ಅತ್ಯಂತ ಮುಖ್ಯ ಎಂದು ಅವರು ವಿವರಿಸಿದರು.

ಪ್ರಮುಖ ಪರೀಕ್ಷೆಗಳು

*ಪಿಎಸ್‌ಎಲ್‌ವಿ ರಾಕೆಟ್‌ ಕ್ರೂ ಮಾಡ್ಯೂಲ್‌ ಮತ್ತು ಅಪಾಯದ ಸಂದರ್ಭದಲ್ಲಿ ಅದನ್ನು ಸೆಳೆದೊಯ್ಯುವ ಪುಟ್ಟ ರಾಕೆಟ್‌ನ ಪರೀಕ್ಷೆ ಇದೇ ಮೊದಲ ಬಾರಿ ನಡೆಯುತ್ತಿದೆ. ಈ ಪುಟ್ಟ ರಾಕೆಟ್‌ ಅನ್ನು ಇಸ್ರೊ ಅಭಿವೃದ್ಧಿಪಡಿಸಿದೆ.

* ಕ್ರೂ ಮಾಡ್ಯೂಲ್‌ ಪಿಎಸ್‌ಎಲ್‌ವಿಯಿಂದ ಬೇರ್ಪಡಿಸುವುದು.

* ಪುಟ್ಟ ರಾಕೆಟ್‌ನಿಂದ ಬೇರ್ಪಟ್ಟ ಬಳಿಕ ಕ್ರೂ ಮಾಡ್ಯೂಲ್ ಅನ್ನು ಪ್ಯಾರಾಚೂಟ್‌ಗಳ ಮೂಲಕ ಸುರಕ್ಷಿತವಾಗಿ ಸಮುದ್ರಕ್ಕೆ ಇಳಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT