ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mizoram: ಡಿ.8ರಂದು ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮಾ ಪ್ರಮಾಣ ವಚನ

Published 5 ಡಿಸೆಂಬರ್ 2023, 7:46 IST
Last Updated 5 ಡಿಸೆಂಬರ್ 2023, 7:46 IST
ಅಕ್ಷರ ಗಾತ್ರ

ನವದೆಹಲಿ: ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮಾ ಅವರು ಡಿ.8ರಂದು (ಶುಕ್ರವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಐಜ್ವಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಲಾಲ್ದುಹೋಮಾ ಅವರು ಇಂದು ರಾತ್ರಿ 8 ಗಂಟೆಗೆ ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಹೊಸ ಪ್ರಾದೇಶಿಕ ಪಕ್ಷವಾಗಿರುವ ಜೋರಂ ಪೀಪಲ್ಸ್ ಮೂವ್‌ಮೆಂಟ್‌ (ಝೆಡ್‌ಪಿಎಂ) ಮಿಜೋರಾಂ ವಿಧಾನಸಭೆಯಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಗೆಲುವಿನ ಮೂಲಕ ಝೆಡ್‌ಪಿಎಂ ಪಕ್ಷವು, ಸರ್ಕಾರ ರಚನೆಯಲ್ಲಿ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್‌) ಮತ್ತು ಕಾಂಗ್ರೆಸ್ 1987ರಿಂದಲೂ ಹೊಂದಿದ್ದ ಪಾರಮ್ಯವನ್ನು ಮುರಿದಿದೆ.

ಸತತ ಎರಡನೆಯ ಬಾರಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇದ್ದ ಎಂಎನ್‌ಎಫ್‌ ಪಕ್ಷವು 10 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಕಾಂಗ್ರೆಸ್ ಪಕ್ಷವು ಒಂದು ಸ್ಥಾನ ಮಾತ್ರ ಗೆದ್ದು, ತೀವ್ರ ಹಿನ್ನಡೆ ಅನುಭವಿಸಿದೆ. ಒಂದು ಕಾಲದಲ್ಲಿ ಮಿಜೋರಾಂ ರಾಜ್ಯವು ಕಾಂಗ್ರೆಸ್ಸಿನ ಭದ್ರ ನೆಲೆಯೂ ಆಗಿತ್ತು.

2018ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಎರಡು ಸ್ಥಾನ ಪಡೆದಿದೆ. ಈ ಬಾರಿ ಮೂವರು ಮಹಿಳೆಯರು (ಝೆಡ್‌ಪಿಎಂನಿಂದ ಇಬ್ಬರು, ಎಂಎನ್‌ಎಫ್‌ನಿಂದ ಒಬ್ಬರು) ವಿಧಾನಸಭೆ ಪ್ರವೇಶಿಸಲಿದ್ದಾರೆ. ಮುಖ್ಯಮಂತ್ರಿ ಜೋರಮ್‌ಥಂಗಾ ಮತ್ತು ಉಪ ಮುಖ್ಯಮಂತ್ರಿ ತಾವ್ನ್‌ಲುಯಾ ಅವರು ಸೋಲುಂಡಿರುವುದು ಎಂಎನ್‌ಎಫ್‌ಗೆ ತೀವ್ರ ಆಘಾತ ಉಂಟುಮಾಡಿದೆ. ಇವರಿಬ್ಬರ ಎದುರು ಝೆಡ್‌ಪಿಎಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಮಾಜಿ ಐಪಿಎಸ್‌ ಅಧಿಕಾರಿ ಲಾಲ್ದುಹೋಮಾ ನೇತೃತ್ವದ ಝೆಡ್‌ಪಿಎಂ ಹೊಸ ವ್ಯವಸ್ಥೆಯನ್ನು ತರುವ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡಿತ್ತು. ‘ಇಲ್ಲಿ ಕೆಲಸ ಮಾಡಿರುವುದು ಆಡಳಿತ ವಿರೋಧಿ ಅಲೆ ಮಾತ್ರ. ಹೊಸ ಪಕ್ಷವೊಂದಕ್ಕೆ ಅವಕಾಶ ಕಲ್ಪಿಸುವ ಬಯಕೆಯು ಮತದಾರರಲ್ಲಿ ಇತ್ತು. ಝೆಡ್‌ಪಿಎಂ ಪಕ್ಷ ನೀಡಿದ ಭರವಸೆಗಳು ಅವರಿಗೆ ಆಕರ್ಷಕವಾಗಿ ಕಂಡಿವೆ’ ಎಂದು ಮಿಜೋರಾಂ ವಿ.ವಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಜಾಂಗ್‌ ಖೊಂಗಂ ದೌಂಗೆಲ್ ವಿಶ್ಲೇಷಿಸಿದ್ದಾರೆ.

‘ಎಂಎನ್‌ಎಫ್‌, ಕಾಂಗ್ರೆಸ್ ಮತ್ತು ಅವರ ಭ್ರಷ್ಟಾಚಾರವನ್ನು ತೊಲಗಿಸಲು ಜನರು ಬಯಸಿದ್ದಾರೆ. ಹೀಗಾಗಿ ಅವರು ಝೆಡ್‌ಪಿಎಂ ಪಕ್ಷಕ್ಕೆ ಮತ ನೀಡಿದ್ದಾರೆ’ ಎಂದು ಮತದಾನದ ನಂತರ ಲಾಲ್ದು ಹೋಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT