ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋರಿಕೆಯಿಲ್ಲದೆ ಪರೀಕ್ಷೆ ನಡೆಸುವುದು ಮೋದಿ ಸರ್ಕಾರಕ್ಕೆ ಅಸಾಧ್ಯ: ಖರ್ಗೆ

Published 20 ಜೂನ್ 2024, 9:51 IST
Last Updated 20 ಜೂನ್ 2024, 9:51 IST
ಅಕ್ಷರ ಗಾತ್ರ

ನವದೆಹಲಿ: ಯುಜಿಸಿ-ನೆಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರತಿ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು, ಇದು ಯಾವ ರೀತಿಯ ಪರೀಕ್ಷಾ ಪೇ ಚರ್ಚಾ?’ ಎಂದು ಕೇಳಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಪ್ರತಿ ವರ್ಷ ‘ಪರೀಕ್ಷಾ ಪೇ ಚರ್ಚಾ’ ಎಂಬ ಹಾಸ್ಯಾಸ್ಪದ ಕಾರ್ಯಕ್ರಮವನ್ನು ನಡೆಸುತ್ತಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯಿಲ್ಲದೆ ಯಾವುದೇ ಪರೀಕ್ಷೆಯನ್ನು ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ’ ಎಂದು ಕುಟುಕಿದ್ದಾರೆ.

‘ಮೋದಿ ಸರ್ಕಾರವು ದೇಶದ ಶಿಕ್ಷಣ ಮತ್ತು ನೇಮಕಾತಿ ವ್ಯವಸ್ಥೆಯನ್ನು ಹೇಗೆ ಹಾಳು ಮಾಡಿದೆ ನೋಡಿ. ನೀಟ್ ಸೇರಿದಂತೆ ಯುಜಿಸಿ–ನೆಟ್‌, ಸಿಯುಇಟಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಮತ್ತು ವಂಚನೆ ನಡೆದ ವಿಷಯಗಳು ಇದೀಗ ಬಯಲಾಗಿವೆ. ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ’ ಎಂದು ಕಿಡಿಕಾರಿದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡದೇ ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯೂಎಸ್‌ ಮೀಸಲಾತಿ ಹಕ್ಕಗಳನ್ನು ಯುವಕರಿಂದ ಕಸಿದುಕೊಳ್ಳಲು ಮೋದಿ ಸರ್ಕಾರ ಯೋಜಿತ ಪಿತೂರಿ ನಡೆಸಿದೆ’ ಎಂದು ಹೇಳಿದ್ದಾರೆ.

‘ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಬದಲು ಅದಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಯುಜಿಸಿ, ಸಿಬಿಎಸ್‌ಇ, ಐಐಟಿ, ಐಐಎಂ ಮುಂತಾದ ಸಂಸ್ಥೆಗಳ ಸ್ವಾಯತ್ತತೆಯನ್ನು ರದ್ದುಗೊಳಿಸಲಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಆರ್‌ಟಿಐ ಪ್ರಕಾರ 6 ವರ್ಷಗಳಲ್ಲಿ ಪ್ರಧಾನಿ ಮೋದಿಯವರ 'ಪರೀಕ್ಷಾ ಪೇ ಚರ್ಚಾ' ವೆಚ್ಚವು ಶೇಕಡಾ 175 ರಷ್ಟು ಹೆಚ್ಚಾಗಿದೆ. ಸೋರಿಕೆ ಇಲ್ಲದೆ ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ನಡೆಸಲಾಗದ ಸರ್ಕಾರದ ಮುಖ್ಯಸ್ಥರು 'ಪರೀಕ್ಷೆ' ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಜ್ಞಾನದ ಸುರಿಮಳೆಗೈದಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಲಕ್ಷಾಂತರ ಯುವಕರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿದ ಪ್ರಧಾನಿ ನಿನ್ನೆ ಕ್ಯಾಮೆರಾಗಳ ನೆರಳಿನಲ್ಲಿ ವಿಶ್ವವಿದ್ಯಾಲಯದ ಸುತ್ತ ತಿರುಗುತ್ತಿದ್ದರು’ ಎಂದು ಪರೋಕ್ಷ ದಾಳಿ ಮಾಡಿದ್ದಾರೆ.

ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯುಂಟಾಗಿರಬಹುದೆಂಬ ಮಾಹಿತಿಗಳು ಲಭಿಸಿರುವುದರಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಸಚಿವಾಲಯ ಬುಧವಾರ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT