ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ದೇಶದ ಹೆಣ್ಣು ಮಕ್ಕಳ ಪರೀಕ್ಷೆ ಎದುರಿಸುತ್ತಿದೆ: ಕಾಂಗ್ರೆಸ್‌ ಟೀಕೆ

ಕುಸ್ತಿಪಟುಗಳಿಗೆ ಬ್ರಿಜ್‌ ಭೂಷಣ್‌ ಲೈಂಗಿಕ ಕಿರುಕುಳ ಪ್ರಕರಣ
Published 11 ಜುಲೈ 2023, 12:52 IST
Last Updated 11 ಜುಲೈ 2023, 12:52 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ. ಸರ್ಕಾರವು ಭಾರತದ ಹೆಣ್ಣುಮಕ್ಕಳಿಂದ ಪರೀಕ್ಷೆ ಎದುರಿಸುತ್ತಿದೆ ಎಂದು ಹೇಳಿದೆ.

’ಭಾರತೀಯ ಕುಸ್ತಿ ಫೆಡೆರೇಷನ್‌ (ಡಬ್ಲ್ಯುಎಫ್‌ಐ) ಮುಖ್ಯಸ್ಥರಾಗಿದ್ದ ಸಿಂಗ್ ಅವರನ್ನು ಪ್ರಧಾನಿ ಮೋದಿ ಯಾವಾಗ ಬಿಜೆಪಿಯಿಂದ ಉಚ್ಚಾಟಿಸುತ್ತಾರೆ ಮತ್ತು ಅವರನ್ನು ಯಾವಾಗ ಬಂಧಿಸಲಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಪ್ರಶ್ನೆ ಮಾಡಿದ್ದಾರೆ. 

’ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ಕಿರುಕುಳದ ವಿಷಯದಲ್ಲಿ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ? ಮೋದಿ ಅವರು ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಯಾವಾಗ ಪಕ್ಷದಿಂದ ಹೊರಹಾಕುತ್ತಾರೆ? ಬ್ರಿಜ್ ಭೂಷಣ್ ಸಿಂಗ್ ಅವರನ್ನು ಯಾವಾಗ ಬಂಧಿಸುತ್ತಾರೆ? ಬ್ರಿಜ್ ಭೂಷಣ್‌ಗೆ ರಕ್ಷಣೆ ನೀಡುವುದನ್ನು ಮತ್ತು ಪೋಷಿಸುವುದನ್ನು ಮೋದಿ ಸರ್ಕಾರವು ಯಾವಾಗ ನಿಲ್ಲಿಸುತ್ತದೆ’ ಎಂದು ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  

’ನೀವು ಮತ್ತು ನಿಮ್ಮ ಸರ್ಕಾರವು ಪರೀಕ್ಷೆಯನ್ನು ಎದುರಿಸುತ್ತಿದ್ದೀರಿ ಮಿಸ್ಟರ್‌ ಮೋದಿಯವರೇ. ಆದರೆ ಪರೀಕ್ಷೆ ಪ್ರತಿಪಕ್ಷದಿಂದಲ್ಲ, ಅದು ಭಾರತದ ಹೆಣ್ಣುಮಕ್ಕಳಿಂದ’ ಎಂದು ಕಾಂಗ್ರೆಸ್ ವಕ್ತಾರೆ ವಾಗ್ದಾಳಿ ನಡೆಸಿದ್ದಾರೆ. 

’ಪ್ರಕರಣದ ಪರಾಮರ್ಶೆಗೆ ಮೇರಿ ಕೋಮ್‌ ನೇತೃತ್ವದಲ್ಲಿ ಜನವರಿಯಲ್ಲಿ ರಚನೆಯಾದ 6 ಜನರ ಸಮಿತಿಯೂ ಆರೋಪಗಳನ್ನು ನಿರ್ಲಕ್ಷಿಸಿತು. ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಸರ್ಕಾರವೂ ಮೌನವಹಿಸಿತು. ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆಯೇ? ಬಿಜೆಪಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮೌನವಹಿದ್ದಾರೆ. ಅವರು ರಾಹುಲ್ ವಿರುದ್ಧದ ವಿಷಕಾರಲು ಮಾತ್ರ ಬಾಯಿ ತೆರೆಯುತ್ತಾರೆ’ ಎಂದು ಕಾಂಗ್ರೆಸ್ ವಕ್ತಾರೆ ಟೀಕಾ ಪ್ರಹಾರ ನಡೆಸಿದರು. 

ಇದೇ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ’ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಕಾನೂನಾತ್ಮಕವಾಗಿ ಮತ್ತು ನೈತಿಕ ನೆಲೆಗಟ್ಟಿನಲ್ಲಿ ಅವರ ಹುದ್ದೆಯಿಂದ ಕಿತ್ತೊಗೆಯಬೇಕು. ನ್ಯಾಯಯುತ ತನಿಖೆ ನಡೆಯಬೇಕು. ಅವರನ್ನು ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಪಡಿಸಬೇಕು‘ ಎಂದು ಹೇಳಿದ್ದಾರೆ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ, ಆರು ಕುಸ್ತಿಪಟುಗಳನ್ನು ಹಿಂಬಾಲಿಸಿದ ಆರೋಪವನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಹೊರಿಸಿ ದೆಹಲಿ ಪೊಲೀಸರು ಜೂನ್ 15 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು. ಜತೆಗೆ, ಅಪ್ರಾಪ್ತ ಕುಸ್ತಿಪಟುವೊಬ್ಬರು ಪೋಕ್ಸೊ ಕಾಯ್ದೆ ಅಡಿ ದಾಖಲಿಸಿದ್ದ ದೂರಿಗೆ ಸಾಕ್ಷ್ಯಗಳಿಲ್ಲದ ಕಾರಣ ಅದನ್ನು ರದ್ದುಗೊಳಿಸಲು ಶಿಫಾರಸು ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT