ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪವಿತ್ರ ಸ್ಥಳಗಳ ಮಹತ್ವ ಅರಿತುಕೊಳ್ಳಲಿಲ್ಲ: ಮೋದಿ

₹ 11,600 ಕೋಟಿ ವೆಚ್ಚದ ಮೂಲ ಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ: ವಿಕಾಸ್‌, ವಿರಾಸತ್‌ಗೆ ಒತ್ತು
Published 4 ಫೆಬ್ರುವರಿ 2024, 15:29 IST
Last Updated 4 ಫೆಬ್ರುವರಿ 2024, 15:29 IST
ಅಕ್ಷರ ಗಾತ್ರ

ಗುವಾಹಟಿ: ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಪವಿತ್ರ ಸ್ಥಳಗಳು ಮತ್ತು ಪ್ರಾಚೀನ ನಾಗರಿಕತೆಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಅನ್ನು ಖಂಡಿಸಿದರು.

ಸರ್ಕಾರಗಳ ಈ ಧೋರಣೆಯನ್ನು ಕಳೆದ 10 ವರ್ಷಗಳಲ್ಲಿ ‘ವಿಕಾಸ್‌’ (ಅಭಿವೃದ್ಧಿ) ಮತ್ತು ‘ವಿರಾಸತ್‌’ (ಪರಂಪರೆ) ಅನ್ನು ಕೇಂದ್ರೀಕರಿಸಿದ ನೀತಿಗಳ ಮೂಲಕ ಬದಲಿಸಿದ್ದೇವೆ. ಯಾವುದೇ ದೇಶವು ತನ್ನ ಹಿಂದಿನ ಪರಂಪರೆಯನ್ನು ಮರೆತು ಪ್ರಗತಿ ಸಾಧಿಸಲು ಆಗದು ಎಂದು ಅವರು ಹೇಳಿದರು.

ಗುವಾಹಟಿಯಲ್ಲಿ ಸುಮಾರು ₹ 11,600 ಕೋಟಿ ವೆಚ್ಚದ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಅವರು, ಬೃಹತ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಆಧುನಿಕ ಸೌಕರ್ಯಗಳೊಂದಿಗೆ ಸಂಪರ್ಕಿಸುವಂತೆ ಮಾಡುವುದು ಹಾಗೂ ಆ ನೆಲೆಗಳ ಸಂರಕ್ಷಿಸುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುತ್ತದೆ ಎಂದು ಭರವಸೆ ನೀಡಿದರು.

‘ವಾರಾಣಸಿಯಲ್ಲಿ ಕಾಶಿ ಕಾರಿಡಾರ್‌ ಅಭಿವೃದ್ಧಿಯ ಬಳಿಕ ಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ 8.50 ಕೋಟಿ ಯಾತ್ರಿಕರು ಕಾಶಿಗೆ, ಐದು ಕೋಟಿಗೂ ಹೆಚ್ಚು ಯಾತ್ರಿಕರು ಉಜ್ಜಯಿನಿಯ ಮಹಾಕಾಲ್‌ ಲೋಕಕ್ಕೆ ಹಾಗೂ 19 ಲಕ್ಷಕ್ಕೂ ಹೆಚ್ಚು ಭಕ್ತರು ಕೇದರಧಾಮಕ್ಕೆ ಭೇಟಿ ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

ಅಯೋಧ್ಯೆಯಲ್ಲಿ ರಾಮಮಂದಿರ ತೆರೆದ ಬಳಿಕ, 12 ದಿನಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಇಲ್ಲಿನ ‘ಮಾ ಕಾಮಾಖ್ಯ ದಿವ್ಯ ಲೋಕ ಪರಿಯೋಜನಾ’ ಕಾರ್ಯ ಪೂರ್ಣಗೊಂಡ ಬಳಿಕ ಇಲ್ಲಿಗೂ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದರು.

ಇದರಿಂದ ರಿಕ್ಷಾ ಚಾಲಕರು, ಹೋಟೆಲ್‌ ಮಾಲೀಕರು, ರಸ್ತೆ ಬದಿಯ ವ್ಯಾಪಾರಿಗಳೂ ಸೇರಿದಂತೆ ಹಲವರಿಗೆ ಆದಾಯ ಹೆಚ್ಚುತ್ತದೆ ಎಂದ ಅವರು, ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದು ಹೇಳಿದರು.

ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರಗಳು ಮೂಲ ಸೌಕರ್ಯ ವೃದ್ಧಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿವೆ. ‘ಈ ಭಾಗದಲ್ಲಿ ಹಿಂದೆ ಸಾಮಾನ್ಯವಾಗಿದ್ದ ದಿಗ್ಬಂಧನ, ಬಾಂಬ್ ಸ್ಫೋಟಗಳು ಅಭಿವೃದ್ಧಿಗೆ ಮಾರಕವಾಗಿದ್ದವು. ಇದರಿಂದ ಜನರು ಈಶಾನ್ಯ ಭಾರತದತ್ತ ಬರಲು ಹಿಂಜರಿಯುತ್ತಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ದಾಖಲೆ ಪ್ರಮಾಣದ ಪ್ರವಾಸಿಗರು ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದಾರೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT