ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಮೊ ಚಾಲೆಂಜ್‌’, ಜೋಕೆ!

ಅಪಾಯಕಾರಿ ಆಟ ಮಕ್ಕಳೇ ಗುರಿ l ಪಾಲಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ
Last Updated 7 ಸೆಪ್ಟೆಂಬರ್ 2018, 20:03 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕಳೆದ ವರ್ಷ ಭಾರಿ ಆತಂಕ ಸೃಷ್ಟಿಸಿದ್ದ ‘ಬ್ಲೂವೇಲ್‌ ಚಾಲೆಂಜ್‌’ ಆತ್ಮಹತ್ಯಾ ಆಟದ ರೀತಿಯಲ್ಲಿಯೇ ‘ಮೋಮೊ ಚಾಲೆಂಜ್‌’ ಎಂಬ ಆಟ ಈಗ ಕಳವಳಕ್ಕೆ ಕಾರಣವಾಗಿದೆ.

‘ಮೋಮೊ ಚಾಲೆಂಜ್‌’ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (ಡಬ್ಲ್ಯುಸಿಡಿ) ಎಚ್ಚರಿಕೆ ನೀಡಿದೆ.

ವಿವಿಧ ಸಾಮಾಜಿಕ ಜಾಲತಾ ಣಗಳಲ್ಲಿ ಈ ಆಟ ಹರಿದಾಡುತ್ತಿದೆ. ಮುಖ್ಯವಾಗಿ ಇದು ವಾಟ್ಸ್‌ಆ್ಯಪ್‌ ಮೂಲಕ ಪ್ರಸಾರವಾಗುತ್ತಿದೆ. ಅಪಾಯ ಕಾರಿಯಾದ ಹಲವು ಸಾಹಸಗಳ ಕೊನೆಗೆ ಆತ್ಮಹತ್ಯೆಯ ಸವಾಲು ಈ ಆಟದ ವೈಖರಿಯಾಗಿದೆ.

ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಎಂದು ಇಲಾಖೆಯ ಮಕ್ಕಳ ಅಭಿವೃದ್ಧಿ ವಿಭಾಗವು ಪಾಲಕರಿಗೆ ಸೂಚನೆ ನೀಡಿದೆ.‌

ಕಳೆದ ವರ್ಷವೂ ‘ಬ್ಲೂವೇಲ್‌ ಚಾಲೆಂಜ್‌’ ಎಂಬ ಹೆಸರಿನ ಅಪಾಯ ಕಾರಿ ಆಟ ಅಂತರ್ಜಾಲದಲ್ಲಿ ಹರಿದಾಡಿತ್ತು. ಭಾರತದಲ್ಲಿಯೂ ಈ ಆಟದ ಮೂಲಕ ಕೆಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಶಂಕೆ ಉಂಟಾಗಿತ್ತು. ಆ ಸಂದರ್ಭದಲ್ಲಿಯೂ ಶಿಕ್ಷಕರು ಮತ್ತು ಪಾಲಕರಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಎಚ್ಚರಿಕೆ ನೀಡಿತ್ತು.

12ರಿಂದ 19ರ ವಯೋಮಾನದವರು ಈ ಆಟಕ್ಕೆ ತುತ್ತಾಗುವ ಅಪಾಯ ಹೆಚ್ಚು ಎಂದು ಎನ್‌ಸಿಪಿಸಿಆರ್‌ ಹೇಳಿತ್ತು.

**

ಆಟ ಅಂಟುವ ಬಗೆ

* ಮೋಮೊ ಹೆಸರಿನಲ್ಲಿ ಅಪರಿಚಿತ ಸಂಪರ್ಕ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಸಂಪರ್ಕ ಪಟ್ಟಿಗೆ ಸೇರಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಹದಿಹರೆಯದವರು ಈ ಆಟದ ಮುಖ್ಯ ಗುರಿ

* ಈ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಸಂಪರ್ಕ ಪಟ್ಟಿಗೆ ಸೇರಿಸಿದ ಬಳಿಕ, ಮೋಮೊ ಎಂಬ ಹೆಸರಿನ ಜಪಾನಿ ಬೊಂಬೆಯ ಚಿತ್ರ ಕಾಣಿಸಿಕೊಳ್ಳುತ್ತದೆ. ಕಣ್ಣುಗಳು ಹೊರಚಾಚಿಕೊಂಡಿರುವ ಬೊಂಬೆಯ ಚಿತ್ರ ಭಯಾನಕವಾಗಿರುತ್ತದೆ

* ಸರಣಿ ಸವಾಲುಗಳನ್ನು ಎದುರಿಸುವಂತೆ ಆಟಗಾರರಿಗೆ ಆಟದ ನಿರ್ವಾಹಕರು ಕುಮ್ಮಕ್ಕು ನೀಡುತ್ತಾರೆ. ಇವುಗಳಲ್ಲಿ ಹೆಚ್ಚಿನವು ಅಪಾಯಕಾರಿ ಸವಾಲುಗಳೇ ಆಗಿರುತ್ತವೆ. ಕೊನೆಗೆ ಆತ್ಮಹತ್ಯೆಯ ಸವಾಲು ಒಡ್ಡಲಾಗುತ್ತದೆ

* ನಿರ್ವಾಹಕರು ನೀಡಿದ ನಿರ್ದೇಶನಗಳನ್ನು ಪಾಲಿಸದೇ ಇದ್ದರೆ ಹಿಂಸಾತ್ಮಕ ಚಿತ್ರಗಳು, ವಿಡಿಯೊಗಳು ಅಥವಾ ಧ್ವನಿಮುದ್ರಿಕೆಯ ಮೂಲಕ ಆಟಗಾರರನ್ನು ಬೆದರಿಸಲಾಗುತ್ತದೆ‌

**

ಮುನ್ನೆಚ್ಚರಿಕೆ ಕ್ರಮಗಳು

* ಮಕ್ಕಳ ಆನ್‌ಲೈನ್‌ ಮತ್ತು ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ಕಣ್ಣಿರಿಸಿ. ಅವರು ‘ಮೋಮೊ ಚಾಲೆಂಜ್‌’ನಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

* ಮಕ್ಕಳು ಅಸಾಧಾರಣವಾಗಿ ನಿಗೂಢವಾಗಿ ವರ್ತಿಸುತ್ತಿದ್ದಾರೆಯೇ, ಅಂತರ್ಜಾಲ ಚಟುವಟಿಕೆಗಳ ಬಗ್ಗೆ ರಹಸ್ಯ ಕಾಪಾಡಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ಗಮನಿಸಿ.

* ಮಕ್ಕಳು ಬಳಸುತ್ತಿರುವ ಕಂಪ್ಯೂಟರ್‌ ಅಥವಾ ಮೊಬೈಲ್‌ಗೆ ಉತ್ತಮವಾದ ‘ಸೈಬರ್‌ ಅಥವಾ ಮೊಬೈಲ್‌ ಪಾಲಕರ ನಿಗಾ’ ಸಾಫ್ಟ್‌ವೇರ್‌ ಅಳವಡಿಸಿ.

*‘ಜೀವನದ ಸವಾಲುಗಳನ್ನು ಎದುರಿಸಲು ಅವರ ಜತೆಗೆ ಇರುತ್ತೇವೆ’ ಎಂದು ಮಕ್ಕಳಿಗೆ ಮನದಟ್ಟು ಮಾಡಿ. ಮಕ್ಕಳು ನಿಜಕ್ಕೂ ಅಪಾಯಕ್ಕೆ ಸಿಕ್ಕಿಕೊಂಡಿದ್ದಾರೆ ಎಂದು ಅನಿಸಿದರೆ ತಕ್ಷಣ ವೃತ್ತಿಪರರ ಸಲಹೆ ಪಡೆಯಿರಿ.

**

ಅಂತರ್ಜಾಲದಲ್ಲಿ‘ಮೋಮೊ ಚಾಲೆಂಜ್’ ಹುಡುಕಾಟ

‘ಮೋಮೊ ಚಾಲೆಂಜ್’ ಎಂಬ ಆಟವನ್ನು ಗೂಗಲ್‌ನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಹುಡುಕಿದವರಲ್ಲಿ ರಾಜ್ಯ 14ನೇ ಸ್ಥಾನದಲ್ಲಿದೆ. ಹೀಗೆ ಹುಡುಕಾಡಿದವರಲ್ಲಿ ಬೆಂಗಳೂರಿಗರೇ ಹೆಚ್ಚು ಇದ್ದಾರೆ ಎಂದು ಗೂಗಲ್ ಟ್ರೆಂಡ್ಸ್‌ ಅಂಕಿಅಂಶಗಳು ಹೇಳುತ್ತವೆ. ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ನಾಗಾಲ್ಯಾಂಡ್, ಮಿಜೊರಾಂ, ಮಣಿಪುರ, ಮೇಘಾಲಯ ರಾಜ್ಯಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿವೆ.

**

ಮಾಹಿತಿ ಕಳ್ಳತನದ ಗುರಿ

ಇದೊಂದು ಹುಸಿ ಬೆದರಿಕೆಯ ಆಟ. ಈ ಆಟದಲ್ಲಿ ಜನರನ್ನು ತೊಡಗಿಸಿಕೊಳ್ಳುವ ಮೂಲಕ ಮಾಹಿತಿ ಕದಿಯುವುದು ಉದ್ದೇಶ ಆಗಿರಬಹುದು ಎಂದು ಸೈಬರ್‌ ಅಪರಾಧ ತಡೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT