ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗೆ ಥಳಿತ: ಸಿಟ್ಟಾದ ವ್ಯಕ್ತಿ ಹಾರಿಸಿದ ಗುಂಡಿಗೆ ಇಬ್ಬರ ಬಲಿ

Published 19 ಆಗಸ್ಟ್ 2023, 12:53 IST
Last Updated 19 ಆಗಸ್ಟ್ 2023, 12:53 IST
ಅಕ್ಷರ ಗಾತ್ರ

ಇಂದೋರ್: ಸಾಕುನಾಯಿಗಳ ನಡುವೆ ಶುರುವಾದ ಕಚ್ಚಾಟ ಅವುಗಳ ಮಾಲೀಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿ, ಅಂತಿಮವಾಗಿ ಇಬ್ಬರ ಕೊಲೆಯಲ್ಲಿ ಜಗಳವು ಅಂತ್ಯವಾದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಬ್ಯಾಂಕ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ನಾಯಿ ಮಾಲೀಕ ರಾಜ್‌ಪಾಲ್ ಸಿಂಗ್ ರಾಜಾವತ್ ಜಗಳದಿಂದ ಕುಪಿತಗೊಂಡು, ತನ್ನಲ್ಲಿದ್ದ ಡಬಲ್ ಬ್ಯಾರಲ್ ಗನ್‌ನಿಂದ ಜನರ ಗುಂಪಿನತ್ತ ಗುಂಡು ಹಾರಿಸಿದ್ದಾನೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಗರ್ಭಿಣಿ ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. 

ಆರೋಪಿ ಗನ್‌ನಿಂದ ಗುಂಡು ಹಾರಿಸುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಜಾವತ್‌ನನ್ನು ಬಂಧಿಸಲಾಗಿದೆ. ಆತನಿಂದ ಡಬಲ್‌ ಬ್ಯಾರಲ್‌ನ 12 ಬೋರ್‌ ಗನ್, ಅದರ ಲೈಸೆನ್ಸ್, ಕಾಟ್ರಿಡ್ಜ್‌ ಕೇಸ್, ಕೆಲ ಗುಂಡು ವಶಕ್ಕೆ ಪಡೆಯಲಾಗಿದೆ ಎಂದು ಇಂದೋರ್ ಜಿಲ್ಲೆ ಖಜ್ರಾನಾ ಠಾಣೆಯ ಅಧಿಕಾರಿ ಉಮ್ರಾವ್‌ ಸಿಂಗ್‌ ತಿಳಿಸಿದ್ದಾರೆ.   

ಗುಂಡಿನ ದಾಳಿಯಿಂದ ರಾಹುಲ್‌ ವರ್ಮಾ (28), ಆತನ ಸಂಬಂಧಿ ವಿಮಲ್‌ ಆಮ್ಚಾ (35) ಮೃತಪಟ್ಟಿದ್ದಾರೆ. ರಾಹುಲ್‌ ವರ್ಮಾ ಅವರ ಗರ್ಭಿಣಿ ಪತ್ನಿ ಜ್ಯೋತಿ ಹಾಗೂ ಇತರ ಐವರು ಗಾಯಗೊಂಡಿದ್ದಾರೆ. ಇವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಠಾಣೆ ವ್ಯಾಪ್ತಿಯ ಕೃಷ್ಣಭಾಗ್ ಕಾಲೊನಿ ನಿವಾಸಿ ರಾಜಾವತ್  ಸಾಕುನಾಯಿಯೊಂದಿಗೆ ವಾಯುವಿಹಾರಕ್ಕೆ ತೆರಳಿದ್ದರು. ಹತ್ತಿರವೇ ಇದ್ದ ಆಮ್ಚಾ ಮನೆಯ ಬಳಿಗೆ ಬಂದಾಗ ಅವರು ಸಾಕಿಕೊಂಡಿದ್ದ ನಾಯಿಯನ್ನು ಕಂಡು ಬೊಗಳಿದೆ. ಹಿಂದೆಯೇ ಎರಡೂ ನಾಯಿಗಳ ನಡುವೆ ಕಚ್ಚಾಟ ಆರಂಭವಾಗಿದೆ.

ಕಚ್ಚಾಡುತ್ತಿದ್ದ ನಾಯಿಗಳು ಒಂದು ಹಂತದಲ್ಲಿ ಆಮ್ಚಾ ಮನೆಯ ಆವರಣಕ್ಕೇ ನುಗ್ಗಿವೆ. ಕುಪಿತಗೊಂಡ ಆಮ್ಚಾ ಸಹೋದರ ಪ್ರಮೋದ್‌ ದೊಣ್ಣೆಯಿಂದ ರಾಜಾವತ್‌ ಅವರ ನಾಯಿಗೆ ಹೊಡೆದು ಓಡಿಸಲು ಮುಂದಾಗಿದ್ದಾರೆ. ಇದು, ರಾಜಾವತ್‌ ಅವರನ್ನು ಕೋಪೋದ್ರಿಕ್ತರಾಗಿಸಿದ್ದು, ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ.

ರೊಚ್ಚಿನಿಂದಲೇ ಮನೆಗೆ ತೆರಳಿದ ರಾಜಾವತ್‌ ಡಬಲ್‌ ಬ್ಯಾರಲ್‌ ಗನ್ ಹಿಡಿದು ಟೆರೆಸ್ ಮೇಲೆ ನಿಂತುಕೊಂಡೇ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾರೆ. ಬಳಿಕ ಕೆಳಗೆ ನಿಂತಿದ್ದ ಜನರ ಗುಂಪಿನತ್ತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT