ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಪಿ ಜತೆ ಮೈತ್ರಿಗೆ ಸಿಟ್ಟು: ಮಗ ಅಖಿಲೇಶ್‌ ವಿರುದ್ಧ ಮುಲಾಯಂ ಮತ್ತೆ ಕಿಡಿ

Last Updated 21 ಫೆಬ್ರುವರಿ 2019, 20:10 IST
ಅಕ್ಷರ ಗಾತ್ರ

ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆ ಸೀಟು ಹೊಂದಾಣಿಕೆ ಮಾಡಿಕೊಂಡಿರುವ ಮಗ ಅಖಿಲೇಶ್‌ ಯಾದವ್‌ ನಡೆಯನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್ ಯಾದವ್ ಟೀಕಿಸಿದ್ದಾರೆ.

‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ’ ಎಂದು ಹಾರೈಸಿ ಪಕ್ಷಕ್ಕೆಮುಜುಗರ ತಂದಿದ್ದ ಮುಲಾಯಂ, ತಮ್ಮ ಮಗನ ವಿರುದ್ಧ ಹರಿಹಾಯುವ ಮೂಲಕ ಮತ್ತೆ ಅಂತಹದ್ದೇ ಯತ್ನ ಮಾಡಿದ್ದಾರೆ. ‘ಈ ಹಿಂದೆ ನಾನೊಬ್ಬನೇ ಕೆಲಸ ಮಾಡಿ ರಾಜ್ಯದಲ್ಲಿ 40 ಸ್ಥಾನಗಳನ್ನು ಗೆಲ್ಲಿಸಿದ್ದೇನೆ. ಬಿಎಸ್‌ಪಿ ಜೊತೆ ಮೈತ್ರಿಯಿಂದ ಪಕ್ಷ ದುರ್ಬಲಗೊಳ್ಳಲಿದೆ’ ಎಂದಿದ್ದಾರೆ.

ಪಕ್ಷದ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ಮಾಯಾವತಿ ನೇತೃತ್ವದ ಪಕ್ಷಕ್ಕೆ ಹೆಚ್ಚು ಸೀಟು ಬಿಟ್ಟುಕೊಟ್ಟಿದ್ದು ಏಕೆಂದು ತಿಳಿಯುತ್ತಿಲ್ಲ ಎಂದರು.

‘ಟಿಕೆಟ್ ಬೇಕೇ? ನನ್ನ ಕೇಳಿ’: ಲೋಕಸಭಾ ಚುನಾವಣೆಗೆ ಟಿಕೆಟ್ ಬಯಸುವವರು ತಮ್ಮನ್ನು ಸಂಪರ್ಕಿಸಿ ಎಂದ ಮುಲಾಯಂ, ಮಗ ಅಖಿಲೇಶ್ ತೆಗೆದುಕೊಂಡ ಯಾವುದೇ ನಿರ್ಧಾರ ಬದಲಿಸುವ ಅಧಿಕಾರ ತಮಗಿದೆ ಎಂದು ಹೇಳಿದ್ದಾರೆ. ‘ಟಿಕೆಟ್‌ಗಾಗಿ ಎಷ್ಟು ಜನ ನನಗೆ ಅರ್ಜಿ ಕೊಟ್ಟಿದ್ದೀರಿ. ಯಾರೂ ಇಲ್ಲ. ಹಾಗಾದರೆ ನಿಮಗೆ ಟಿಕೆಟ್ ಹೇಗೆ ಸಿಗುತ್ತದೆ. ಅಖಿಲೇಶ್ ನೀಡಿದ್ದರೂ ಅದನ್ನು ನಾನು ಬದಲಿಸಬಲ್ಲೆ’ ಎಂದಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಅವರು ಈ ವೇಳೆ ಮುಲಾಯಂ ಪಕ್ಕದಲ್ಲಿ ಕುಳಿತಿದ್ದರು.

ಸೀಟು ಹೊಂದಾಣಿಕೆ ಅಂತಿಮ

ಎಸ್‌ಪಿ ಹಾಗೂ ಬಿಎಸ್‌ಪಿ ಸೀಟು ಹೊಂದಾಣಿಕೆಯನ್ನು ಗುರುವಾರ ಅಂತಿಮಗೊಳಿಸಿವೆ.ಮೈತ್ರಿಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಎಸ್‌ಪಿ 37 ಹಾಗೂ ಬಿಎಸ್‌ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮಾಯಾವತಿ ಹಾಗೂ ಅಖಿಲೇಶ್ ಜನವರಿಯಲ್ಲಿ ಘೋಷಿಸಿದ್ದರು.

ಎಸ್‌ಪಿಗೆ ಹಾರ್ದಿಕ್ ಪಟೇಲ್ ಬೆಂಬಲ

ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರು ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ಗುರುವಾರ ಅಖಿಲೇಶ್ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಬಲಗೊಳಿಸುವ ಇಚ್ಛೆ ವ್ಯಕ್ತಪಡಿಸಿದರು.

‘ಬಿಜೆಪಿ ಅತಿಹೆಚ್ಚು ಸಂಪನ್ಮೂಲಗಳನ್ನು ಹೊಂದಿದೆ. ಹೀಗಾಗಿ ನಾವು ಜಾತ್ಯತೀತ ಮೈತ್ರಿಕೂಟವನ್ನು ಬಲಗೊಳಿಸಬೇಕಿದೆ. ಬಿಜೆಪಿ ವಿರುದ್ಧ ಮತಗಟ್ಟೆ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಹಾರ್ದಿಕ್ ಹೇಳಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬಿಜೆಪಿ ವಿರುದ್ಧ ಹೋರಾಡುವವರಿಗೆ ನನ್ನ ಬೆಂಬಲವಿದೆ’ ಎಂದ ಅವರು ಎಲ್ಲ ರಾಜ್ಯಗಳಲ್ಲಿ ಸುತ್ತಾಡಿ, ಬಿಜೆಪಿ ವಿರುದ್ಧ ಅಭಿಯಾನ ನಡೆಸುತ್ತೇನೆ ಎಂದರು.

ಪಟೇಲ್ ಸಮುದಾಯದರು ಹೆಚ್ಚಿರುವ ಉತ್ತರ ಪ್ರದೇಶದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹಾರ್ದಿಕ್‌ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್‌ಗೆ ಹೆಚ್ಚು ಅವಕಾಶ

ನವದೆಹಲಿ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಹೆಚ್ಚು ಅವಕಾಶಗಳಿವೆ ಎಂದುಫಿಚ್ ಸಮೂಹದ ಫಿಚ್ ಸಲ್ಯೂಷನ್ಸ್ ಅಭಿಪ್ರಾಯಪಟ್ಟಿದೆ.

ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಬಲ್ಲ ಪಕ್ಷಗಳು ಹಾಗೂ ಬಿಜೆಪಿ ನಡುವಿನ ಬಿರುಕಿನಿಂದಾಗಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮರು ಆಯ್ಕೆ ಸವಾಲಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ಮುಂದಿನ ಬಾರಿಯ ಸರ್ಕಾರ ರಚನೆ ಮೇಲೆ ಪ್ರಸ್ತುತ ಸರ್ಕಾರದ ನೀತಿಗಳು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮೋದಿ ಹಾಗೂ ಬಿಜೆಪಿಗೆ ಕುಸಿಯುತ್ತಿರುವ ಬೆಂಬಲ, ಮೂರು ರಾಜ್ಯಗಳಲ್ಲಿ ಹೀನಾಯ ಸೋಲು ಸೇರಿದಂತೆ ಹಲವು ವಿಷಯಗಳು ಮತ್ತೆ ಎನ್‌ಡಿಎ ಸರ್ಕಾರ ರಚನೆಗೆ ತೊಡಕಾಗಲಿವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT