ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್ ಲಸಿಕೆ ತಯಾರಿಸಲು ಮುಂಬೈನ ಹಾಫ್‌ಕಿನ್ ಇನ್‌ಸ್ಟಿಟ್ಯೂಟ್‌ಗೆ ಅನುಮತಿ

Last Updated 16 ಏಪ್ರಿಲ್ 2021, 3:14 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ವೈರಸ್‌ ತಡೆ ಲಸಿಕೆ 'ಕೋವ್ಯಾಕ್ಸಿನ್' ತಯಾರಿಕೆಗೆ ಮುಂಬೈ ಮೂಲದ ಹಾಫ್‌ಕಿನ್‌ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

'ಕೋವ್ಯಾಕ್ಸಿನ್' ದೇಶೀಯ ಲಸಿಕೆಯನ್ನು ಭಾರತ್‌ ಬಯೋಟೆಕ್‌ ಮತ್ತು ಐಸಿಎಂಆರ್‌ ಅಭಿವೃದ್ಧಿ ಪಡಿಸಿವೆ. ಪ್ರಸ್ತುತ ಕೋವ್ಯಾಕ್ಸಿನ್ ಮತ್ತು ಸೀರಂ ಇನ್‌ಸ್ಟಿಟ್ಯೂಟ್‌ ತಯಾರಿಸುತ್ತಿರುವ ಕೋವಿಶೀಲ್ಡ್‌ ಲಸಿಕೆಗಳನ್ನು ದೇಶದ ಜನರಿಗೆ ಹಾಕಲಾಗುತ್ತಿದೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದ್ದು, ಲಸಿಕೆ ಕೊರತೆಯು ಎದುರಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಂಬೈನ ಹಾಫ್‌ಕಿನ್‌ ಇನ್‌ಸ್ಟಿಟ್ಯೂಟ್‌ಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಲು ಅನುಮತಿ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿದೆ.

ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸೀತಾರಾಮ್‌ ಕುಂಟೆ ಅವರಿಗೆ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರೇಣು ಸ್ವರೂಪ್ ಅನುಮತಿ ಪತ್ರ ರವಾನಿಸಿದ್ದಾರೆ.

'ಕೋವ್ಯಾಕ್ಸಿನ್ ಲಸಿಕೆ ತಯಾರಿಕೆಗೆ ಹಾಫ್‌ಕಿನ್‌ ಬಯೋ–ಫಾರ್ಮಾಸ್ಯುಟಿಕಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ಸೌಕರ್ಯಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರವು ಸಮ್ಮತಿಸಿದೆ. ತಜ್ಞರು ಅನುಮತಿ ನೀಡಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ರೇಣು ಸ್ವರೂಪ್‌ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಒಂದು ವರ್ಷ ಕೋವ್ಯಾಕ್ಸಿನ್ ಲಸಿಕೆ ತಯಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಲಸಿಕೆ ತಯಾರಿಕೆ ಮತ್ತು ನಿರ್ವಹಣೆ ನಡೆಸಲು ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿಯು ಪ್ರತಿ ತಿಂಗಳು 1.5 ಕೋಟಿ ಡೋಸ್‌ನಷ್ಟು ಕೋವ್ಯಾಕ್ಸಿನ್ ಲಸಿಕೆ ತಯಾರಿಸುತ್ತಿದೆ.

ದೇಶದಲ್ಲಿ ಒಟ್ಟು 11.74 ಕೋಟಿಗೂ ಅಧಿಕ ಡೋಸ್‌ಗಳಷ್ಟು ಲಸಿಕೆ ಹಾಕಲಾಗಿದೆ. ಮಹಾರಾಷ್ಟ್ರದಲ್ಲಿ ಗುರುವಾರ ಕೋವಿಡ್‌ ದೃಢಪಟ್ಟ 61,695 ಪ್ರರಕಣಗಳು ದಾಖಲಾಗಿದ್ದು, ಸೋಂಕಿನಿಂದ 349 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 6,20,060 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT