ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬಿರುಸಿಗೆ ನಲುಗಿದ ಮುಂಬೈ

Last Updated 25 ಜೂನ್ 2018, 20:16 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಮತ್ತು ಠಾಣೆ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆಯಿಂದ ಮುಂಬೈನ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಮಳೆ ಸಂಬಂಧಿ ಅವಘಡಗಳಲ್ಲಿ ಮುಂಬೈನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

24 ಗಂಟೆಗಳ ಅವಧಿಯಲ್ಲಿ 230ಕ್ಕೂ ಹೆಚ್ಚುಮಿಲಿಮೀಟರ್‌ನಷ್ಟು ಮಳೆಯಾದ ಕಾರಣ ದಕ್ಷಿಣ ಮುಂಬೈನ ಹಲವು ವಸತಿ ಪ್ರದೇಶಗಳು ಜಲಾವೃತವಾಗಿವೆ. ರಸ್ತೆ ಮತ್ತು ರೈಲುಹಳಿಗಳ ಮೇಲೆ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಮುಂಬೈ ಉಪನಗರ ರೈಲುಗಳ ಸಂಚಾರದಲ್ಲಿ ವಿಳಂಬವಾಗಿತ್ತು.

ದಕ್ಷಿಣ ಗುಜರಾತ್‌ನಲ್ಲೂ ಮಳೆ:ದಕ್ಷಿಣ ಗುಜರಾತ್‌ನ ಸೂರತ್, ನವಸಾರಿ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಜನಜೀವನ ಏರು ಪೇರಾಗಿದೆ.ವಲ್ಸಾದ್ ಜಿಲ್ಲೆಯ ಉಮೆಗಾಂ ತಾಲ್ಲೂಕು ಒಂದರಲ್ಲೇ ಸೋಮವಾರ 550 ಮಿಲಿಮೀಟರ್ ಮಳೆಯಾಗಿದೆ.

ಪಶ್ಚಿಮ ಬಂಗಾಳ ತತ್ತರ:ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಎರಡೂ ಜಿಲ್ಲೆಗಳ ವಿವಿಧೆಡೆ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ಕೂಚ್ ಬಿಹಾರ್‌ ಜಿಲ್ಲೆಯಲ್ಲಿ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಏತನ್ಮಧ್ಯೆ, ಮುಂಬೈಯ ವಡಾಲಾದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದು ಪಾರ್ಕ್ ಮಾಡಿದ್ದ 15 ಕಾರುಗಳಿಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಭಾರತೀಯ ಹವಾಮಾನ ಇಲಾಖೆ ಮುಂಬೈ ಕಚೇರಿ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆ ಮುಂದುವರಿಯಲಿದೆ.

ರೈಲು ವಿಳಂಬ
ಭಾರಿ ಮಳೆಯಿಂದಾಗಿ ರೈಲು ಸಂಚಾರ ವಿಳಂಬವಾಗಿದೆ. ಬಾಂದ್ರಾ ರೈಲು ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದರಿಂದ ಲೋಕಲ್ ರೈಲುಗಳು 5-10 ನಿಮಿಷ ವಿಳಂಬವಾಗಿ ಸಂಚರಿಸುತ್ತಿದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಸಂಜಯ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಕೆಲವೊಂದು ಪ್ರದೇಶಗಳಲ್ಲಿ ಮಳೆಯಿಂದಾಗಿ ಮಬ್ಬು ಆವರಿಸಿದ್ದರಿಂದ ರೈಲುಗಳು ವಿಳಂಬವಾಗಿ ಸಂಚಾರ ಆರಂಭಿಸಿವೆ ಎಂದು ಪಶ್ಚಿಮ ರೈಲ್ವೆ ಹೇಳಿದೆ.

ಟ್ರಾಫಿಕ್ ಜಾಮ್!
ಗುರ್‍‍ಗಾಂವ್, ಅಂಧೇರಿ, ಕಾಂದಿವಲಿ, ಸಿಯಾನ್, ಮಲಾಡ್, ಖಾರ್, ವಡಾಲಾ, ಫೈವ್ ಗಾರ್ಡನ್ಸ್, ಚೆಂಬೂರ್ ಮತ್ತು ಕುರ್ಲಾದ ರಸ್ತೆಗಳು ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ಆಗಿದೆ.

ಥಾಣೆಯಲ್ಲಿ ಕಳೆದ 24ಗಂಟೆಗಳಲ್ಲಿ 229.81mm ಮಳೆ ದಾಖಲಾಗಿದ್ದು, ಇಲ್ಲಿನ ನೌಪಾದ, ಘಂಟಾಲಿ, ವಂದನಾ ಥಿಯೇಟರ್ ಬಳಿ ರಸ್ತೆಗಳೆಲ್ಲವೂ ಜಲಾವೃತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT